raichur 
ಜಿಲ್ಲೆ

ಕನ್ನಡದಲ್ಲಿ 6ನೇ ವಿಜ್ಞಾನ, ತಂತ್ರಜ್ಞಾನ ಸಮ್ಮೇಳನಕ್ಕೆ ಚಾಲನೆ ಕೃಷಿ ಬೆಳವಣಿಗೆಗೆ ವಿಜ್ಞಾನ, ತಂತ್ರಜ್ಞಾನ ಬಳಕೆ ಪೂರಕ - ಸಚಿವ

ರಾಯಚೂರು ಇಡೀ ಪ್ರಪಂಚದಲ್ಲೇ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಗಗಳ ಗತಿ ವೇಗವಾಗಿದೆ. ಈ ದಿಶೆಯಲ್ಲಿ ಕೃಷಿ ಬೆಳವಣಿಗೆಗೆ ವಿಜ್ಞಾನ, ತಂತ್ರಜ್ಞಾನ ಬಳಕೆಯು ಪೂರಕವಾಗಿದೆಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ 6ನೇ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಜನರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳನ್ನು ಸರಿಯಾಗಿ ಮನದಟ್ಟು ಮಾಡಲು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ನಾನಾ ಕಾರ್ಯಕ್ರಮ ರೂಪಿಸಿ ಜನಪಯುಕ್ತ ಕೆಲಸ ಮಾಡುತ್ತಿದೆ. ವಿಶೇಷವಾಗಿ ಕನ್ನಡದಲ್ಲಿ 6ನೇ ಸಮ್ಮೇಳನ ಹಮ್ಮಿಕೊಂಡಿದ್ದು ಮಾದರಿಯಾಗಿದೆ ಎಂದರು.

ತುಂಗಭದ್ರಾ ಡ್ಯಾಂನ 92 ಟಿಎಂಸಿ ಪ್ರಮಾಣದ ಬಹುತೇಕ ನೀರು ಜಿಲ್ಲೆಯಲ್ಲಿ 6 ಲಕ್ಷ ಎಕರೆ ಭೂಮಿಗೆ ಹರಿಯುತ್ತಿದೆ. ಈ ಭಾಗದಲ್ಲಿ ನೀರಾವರಿ ಪ್ರದೇಶ ಇನ್ನಷ್ಟು ವಿಸ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಪ್ರದೇಶದಲ್ಲಿನ ರೈತರು ತಮ್ಮ ಕೃಷಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಹೊಸ ಪ್ರಯೋಗಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಸಂಸದ ಜಿ. ಕುಮಾರ ನಾಯಕ ಮಾತನಾಡಿ, ಕೃಷಿ ವಿಜ್ಞಾನವು ಈ ಹೊತ್ತಿನ ಅತ್ಯಂತ ಅಗತ್ಯ ಅಧ್ಯಯನದ ವಿಷಯವಾಗಿದೆ. ನೇಗಿಲ ಯೋಗಿ ಎನ್ನುವ ಕವಿ ಕುವೆಂಪು ಅವರ ಹಾಡನ್ನು ಲೋಕಸಭೆಯಲ್ಲಿ ಹೇಳುವ ಸದವಕಾಶ ನನಗೆ ಸಿಕ್ಕಿತ್ತು. ರೈತನಿಗೆ ನಮ್ಮ ದೇಶದಲ್ಲಿ ಮಹತ್ವದ ಸ್ಥಾನ ಇದೆ. ರೈತ ಶಕ್ತಿಯನ್ನು ಅರಿತು ಅವರ ಬದುಕನ್ನು ಸಶಕ್ತಗೊಳಿಸುವಲ್ಲಿ ರೈತ ವಿಜ್ಞಾನಿಗಳ ಮತ್ತು ಕೃಷಿ ವಿಜ್ಞಾನ ಓದುವ ವಿದ್ಯಾರ್ಥಿಗಳ ಪಾತ್ರ ಅಗತ್ಯವಾಗಿದೆ. ರೈತರಿಗೆ ತಿಳಿಯುವ ಭಾಷೆಯಲ್ಲಿ ಸಮ್ಮೇಳನ ಹಮ್ಮಿಕೊಂಡಿದ್ದು ವಿಶೇಷವಾಗಿದೆ ಎಂದು ತಿಳಿಸಿದರು.

ವಿವಿಯ ಪ್ರಾಧ್ಯಾಪಕ ಡಾ.ಎ.ಜಿ.ಶ್ರೀನಿವಾಸ ಮಾತನಾಡಿದರು.

ಇದೇ ವೇಳೆ ಸ್ಮರಣ ಸಂಚಿಕೆಯ ಮುಖಪುಟ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಅಕಾಡೆಮಿಯ ಅಧ್ಯಕ್ಷ ಪ್ರೊ.ರಾಜಾಸಾಬ್ ಎ.ಎಚ್., ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಿ. ಮಲ್ಲಿಕಾರ್ಜುನ, ತಿಮ್ಮಣ್ಣ ಸೋಮಪ್ಪ ಚಾವಡಿ, ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ಡೀನ್ ಡಾ.ಕೆ.ನಾರಾಯಣರಾವ್, ವಿಶ್ರಾಂತ ಕುಲಪತಿ ಡಾ.ಎಂ.ಕೆ.ನಾಯಕ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಪ್ರಾಧ್ಯಾಪಕ ಮಲ್ಲಿಕಾರ್ಜುನ ಅಯ್ಯನಗೌಡರ, ಡಾ.ಶರಣಗೌಡ ಸೇರಿದಂತೆ ಅನೇಕರು ಇದ್ದರು.