ಮಳವಳ್ಳಿ : ಕೆಆರ್‌ಎಸ್ ಅಣೆಕಟ್ಟೆಯ ಹಿನ್ನೀರಿನಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಯೋಜನೆಯಿಂದ ಮಳವಳ್ಳಿ ಮತ್ತು ಮದ್ದೂರು ತಾಲೂಕಿನ ರೈತರಿಗೆ ಮರಣ ಶಾಸನ ಬರೆದಂತಾಗುತ್ತದೆ ಎಂದು ಸಂಪೂರ್ಣ ಸಾವಯವ ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್ ಮಹೇಶ್ ಕುಮಾರ್ ತಿಳಿಸಿದರು.
ಈಗಾಗಲೇ ತಾಲೂಕಿನ ಟಿ.ಕೆ.ಹಳ್ಳಿ ಬಳಿ ಐದನೇ ಹಂತದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಪ್ರಸ್ತುತ ಕನ್ನಂಬಾಡಿ ಹಿನ್ನೀರಿನ ಕಟ್ಟೆಪುರ ಬಳಿಯಿಂದ ಆರನೇ ಹಂತದಲ್ಲಿ 6 ಟಿಎಂಸಿ ನೀರು ತೆಗೆದುಕೊಂಡು ಹೋಗಲು ಸರ್ಕಾರ ಡಿಪಿಆರ್ ಸಿದ್ಧಪಡಿಸಿ ಯೋಜನೆ ರೂಪಿಸಿದೆ. ಇದರಿಂದ ಮಳವಳ್ಳಿ ಮತ್ತು ಮದ್ದೂರು ತಾಲೂಕಿನ ಕೊನೆಯ ಭಾಗದ ರೈತರ ಬೇಸಾಯಕ್ಕೆ ಮುಂದಿನ ದಿನಗಳನ್ನು ತೊಂದರೆಯಾಗುತ್ತದೆ. ಹಾಗಾಗಿ ಕುಡಿಯುವ ನೀರಿನ ಯೋಜನೆಗೆ ನಮ್ಮ ತಕರಾರಿಲ್ಲ. ಬದಲಿಗೆ ಅಣೆಕಟ್ಟೆ ಕೆಳಭಾಗದಲ್ಲಿ ಯೋಜನೆ ಅನುಷ್ಠಾನ ಮಾಡಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಜಿಲ್ಲೆಯ ಕೊನೆಯ ಭಾಗದ ರೈತರ ಹಿತಕ್ಕಾಗಿ ಆರನೇ ಹಂತದ ಬೆಂಗಳೂರು ಕುಡಿಯುವ ನೀರಿನ ಯೋಜನೆ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆ.31 ರಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಂಜೆ 5 ಗಂಟೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಉದ್ದೇಶ ಏನಿತ್ತು ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಿರು ನಾಟಕವನ್ನು ಆಯೋಜಿಸಲಾಗಿದೆ. ಇದಕ್ಕೂ ಮೊದಲು ಕೃಷಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ಅವರಿಂದ ಕನ್ನಂಬಾಡಿ ಹಿನ್ನೀರಿನಿಂದ ತೆಗೆದುಕೊಂಡು ಹೋಗುವ 6 ನೇ ಹಂತದ ಕುಡಿಯುವ ನೀರಿನ ಯೋಜನೆಯಿಂದ ರೈತರಿಗೆ ಆಗುವ ಅನಾನೂಕೂಲಗಳ ಬಗ್ಗೆ ಜಾಗೃತಿ ಮಾಹಿತಿಯನ್ನು ತಿಳಿಸಿಕೊಡಲಿದ್ದಾರೆ ಎಂದರು. ಅಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳುವ ಮೂಲಕ ಹೋರಾಟ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘದ ಕಾರ್ಯದರ್ಶಿ ಚಿಕ್ಕಣ್ಣ, ಎಚ್.ವಿ.ವೀರಭದ್ರು, ಶಿವಕುಮಾರ್, ಮಹದೇವಯ್ಯ ಇದ್ದರು.