ಜಿಲ್ಲೆ

ಬಿಎಸ್‌ಎನ್‌ಎಲ್-ಡಿಒಟಿ ಪಿಂಚಣಿದಾರರ ಸಂಘದ 6 ನೆಯ ದ್ವೈ ವಾರ್ಷಿಕ ಜಿಲ್ಲಾ ಸಮ್ಮೇಳನ

ಕುಮಟಾ: ಜೀವನದಲ್ಲಿ ನಿವೃತ್ತಿ ಎಂಬುದಿಲ್ಲ, ಸೇವಾ ನಿವೃತ್ತಿಯ ಬಳಿಕವೂ ಉತ್ತಮ ಕೆಲಸಕಾರ್ಯಗಳಲ್ಲಿ ಸಕ್ರಿಯವಾಗಿದ್ದರೆ ವೃದ್ಧಾಪ್ಯದಲ್ಲೂ ಹೊಸದೊಂದು ಬದುಕಿನ ಆರಂಭವಾಗುತ್ತದೆ ಎಂದು ಡಾ. ಬಾಳಿಗಾ ಆಂಗ್ಲಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಕೆ.ಜಿ.ಶಾನಭಾಗ ಹೇಳಿದರು.
ಪಟ್ಟಣದ ಮಹಾಲಕ್ಷ್ಮೀ ಕಂಫರ್ಟ್ನ ಶ್ರೀಧಾಮ ಸಭಾಭವನದಲ್ಲಿ ಗುರುವಾರ ಅಖಿಲ ಭಾರತ ಬಿಎಸ್‌ಎನ್‌ಎಲ್-ಡಿಒಟಿ ಪಿಂಚಣಿದಾರರ ಸಂಘದ 6 ನೆಯ ದ್ವೈ ವಾರ್ಷಿಕ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಹಿತನುಡಿದರು.
ಉತ್ತಮ ಚಟುವಟಿಕೆ, ಸಾಮಾಜಿಕ ತುಡಿತ, ತಾಳ್ಮೆಯಿಂದ ಕೂಡಿದ ಸಕ್ರಿಯ ಜೀವನಶೈಲಿಯಿಂದ ಉತ್ತಮ ಆರೋಗ್ಯ, ಆಯುಷ್ಯ, ನೆಮ್ಮದಿ ಪಡೆಯಲು ಸಾಧ್ಯ. ತೀರಾ ಕಷ್ಟದ ಕಾಲದಲ್ಲಿ ದೇಶದಲ್ಲಿ ಸಂವಹನ ಸೌಲಭ್ಯ ಒದಗಿಸಿದ ಅಂಚೆ ಮತ್ತು ತಂತಿ ಇಲಾಖೆ ಇಂದು ಎಷ್ಟೇ ಅತ್ಯಾಧುನಿಕ ಸೌಕರ್ಯಗಳಿಗೆ ಬದಲಾದರೂ ತನ್ನ ಮೂಲಧ್ಯೇಯ ಹಾಗೂ ಗುಣಮಟ್ಟವನ್ನು ಉಳಿಸಿಕೊಂಡಿರುವುದು ಶ್ಲಾಘನೀಯ. ನಮ್ಮೆಲ್ಲ ಹಿರಿಯ ನಾಗರಿಕರ ಅನುಭವದ ಜ್ಞಾನದ, ಮಾರ್ಗದರ್ಶನದ ಅಗತ್ಯತತೆ ಇಂದಿನ ಸಮಾಜಕ್ಕೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಬಿಎಸ್‌ಎನ್‌ಎಲ್-ಡಿಒಟಿ ಪಿಂಚಣಿದಾರರ ಉತ್ತರ ಕನ್ನಡ ಜಿಲ್ಲಾ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಆಹ್ವಾನಿತ ಮುಖ್ಯ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಜಿಲ್ಲಾ ಕಾರ್ಯದರ್ಶಿ ಸಿ.ಆರ್.ಕಲ್ಮನೆ ದ್ವೈ ವಾರ್ಷಿಕ ವರದಿ ಮಂಡಿಸಿ, ಸಂಘಟನೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಜಿಲ್ಲಾ ಸಂಘಟನೆಯು ವಲಯ ಸಂಘಟನೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದರು. ಉತ್ತರ ಕನ್ನಡದಲ್ಲಿ ನಮ್ಮ ಪಿಂಚಣಿದಾರರಿಗೆ ಇನ್ನೂ ತನಕ ವೈದ್ಯಕೀಯ ಭತ್ಯೆ ಜಮಾ ಆಗಿಲ್ಲ ಎಂದು ತಿಳಿಸಿದರು.
ವೇದಿಕೆಯಲ್ಲಿ ಅತಿಥಿಗಳಾದ ಸಂಘದ ಕರ್ನಾಟಕ ವೃತ್ತದ ಅಧ್ಯಕ್ಷ ಕಾಂ. ಆರ್. ಬಿ. ತಟಪತಿ, ವೃತ್ತ ಕಾರ್ಯದರ್ಶಿ ಕಾಂ.ಮುದ್ದಯ್ಯ, ದೆಹಲಿ ಕೇಂದ್ರ ಪ್ರಧಾನ ಕಚೇರಿಯ ಸಹಾಯಕ ಪ್ರಧಾನ ಕಾರ್ಯದರ್ಶಿ ಕಾಂ.ಎಚ್. ಸಿ. ಪ್ರಕಾಶ, ಕೇಂದ್ರ ಸಹಾಯಕ ಸಂಘಟನಾ ಕಾರ್ಯದರ್ಶಿ ಕಾಂ. ಈರಣ್ಣ, ಸಹಾಯಕ ರಾಜ್ಯ ಕಾರ್ಯದರ್ಶಿ ಕಾಂ. ಕೆ. ಚಂದ್ರಶೇಖರನ್, ಮಂಗಳೂರು ಜಿಲ್ಲಾ ಕಾರ್ಯದರ್ಶಿ ಕಾಂ. ಬಿ.ಪಿ.ನಾರಾಯಣ, ಬಿಎಸ್‌ಎನ್‌ಎಲ್ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಕಾಂ.ಕಿಶೋರ ಸಿರ್ಸಿಕರ, ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಕಾಂ.ಸಿ.ಇ. ಗುನಗಿ ಮಾತನಾಡಿದರು. ಜಿಲ್ಲಾಖಜಾಂಚಿ ಎಸ್. ಎಂ. ಗಾಂವಕರ ಇನ್ನಿತರರು ಇದ್ದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಾಮನ ಎ. ಕಾಮತ ಸ್ವಾಗತಿಸಿದರು. ಕಿರಣ ಭಟ್ಟ, ಎಂ. ಎಂ. ಹೆಗಡೆ ನಿರ್ವಹಿಸಿದರು. ಮಧ್ಯಾಹ್ನದ ಬಳಿಕ ಲೆಕ್ಕಪತ್ರ ವಿವರಣೆ ಹಾಗೂ ಚರ್ಚೆ, 2023-25ರ ಸಾಲಿಗಾಗಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು.