ಜಿಲ್ಲೆ

69ಕ್ಕೇರಿದ ಸೋಂಕಿತರ ಸಂಖ್ಯೆ

ಹಾವೇರಿ: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮುಂದುವರಿದಿದ್ದು, ಸೋಮವಾರ ಹಾವೇರಿ ತಾಲೂಕು ಆಲದಕಟ್ಟಿಯ ನಿವಾಸಿ, ಸದ್ಯ ಹಾನಗಲ್ಲ ತಾಲೂಕು ಉಪ್ಪುಣಸಿಯಲ್ಲಿ ವಾಸವಾಗಿದ್ದ 60 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 69ಕ್ಕೇರಿದೆ. ಅದರಲ್ಲಿ 25 ಜನರು ಗುಣವಾಗಿದ್ದು, 44 ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ಕೆಮ್ಮು, ಜ್ವರದಿಂದ ಬಳಲುತ್ತಿದ್ದ ವೃದ್ಧೆ ಜೂ. 24ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. 25ರಂದು ಸ್ವ್ಯಾಬ್ ಟೆಸ್ಟ್​ಗೆ ಕಳಿಸಲಾಗಿತ್ತು. 27ರಂದು ಪಾಸಿಟಿವ್ ದೃಢಪಟ್ಟಿದೆ. ಉಪ್ಪುಣಸಿಯಲ್ಲಿ ವೃದ್ಧೆ ವಾಸಿಸುತ್ತಿದ್ದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಗುರುತಿಸಲಾಗಿದೆ. ಉಪ್ಪುಣಿಸಿ ಗ್ರಾಮವನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ಹಾನಗಲ್ಲ ತಹಸೀಲ್ದಾರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ.

ಜಿಲ್ಲೆಯ ಇಬ್ಬರಿಗೆ ಕಿಮ್ಸ್​ನಲ್ಲಿ ಸೋಂಕು ದೃಢ: ಸವಣೂರಿನ 57 ವರ್ಷದ ಪುರುಷ, ಹಾವೇರಿ ಹೊಸನಗರದ 55 ವರ್ಷದ ಪುರುಷ, ಬ್ಯಾಡಗಿಯ 63 ವರ್ಷದ ವೃದ್ಧನಿಗೂ ಸೋಮವಾರ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಪುರುಷರಿಬ್ಬರು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಾಗಿದ್ದರು. ಹೀಗಾಗಿ ಅಲ್ಲಿಯೇ ಅವರನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳಲಾಗಿದೆ. ಬ್ಯಾಡಗಿಯ 63 ವರ್ಷದ ವೃದ್ಧ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅನ್ಯ ಚಿಕಿತ್ಸೆಗೆ ದಾಖಲಾಗಿದ್ದಾಗ ಅಲ್ಲಿಯೇ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಈ ಮೂರು ಪ್ರಕರಣಗಳು ನಮ್ಮ ಜಿಲ್ಲೆಯ ಸೋಂಕಿತರ ಸಂಖ್ಯೆಗೆ ಸೇರಿಲ್ಲ. ಆದರೆ, ಸೋಂಕಿತ ವ್ಯಕ್ತಿಗಳು ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ.

ಸೋಂಕಿತ ನಿವಾಸವಿರುವ ಬೀದಿ ಸೀಲ್​ಡೌನ್

ದೂದಿಹಳ್ಳಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ ರಟ್ಟಿಹಳ್ಳಿ ತಾಲೂಕಿನ ರಾಮತೀರ್ಥ ಗ್ರಾಮದ ನಿವಾಸಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತನ ಮನೆಯಿರುವ ಬೀದಿಯನ್ನು ಸೋಮವಾರ ಸೀಲ್​ಡೌನ್ ಮಾಡಲಾಗಿದೆ.

ತಹಸೀಲ್ದಾರ್ ಕೆ. ಗುರಬಸವರಾಜ ಮಾತನಾಡಿ, ಕರೊನಾ ಸೋಂಕಿನಿಂದ ಮೃತಪಟ್ಟ ಶಿಕಾರಿಪುರ ತಾಲೂಕಿನ ವೃದ್ಧೆ ರಾಮತೀರ್ಥ ಗ್ರಾಮಕ್ಕೆ ಬಂದಿದ್ದಳು. ಆಗ ವೃದ್ಧೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 25 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಇವರ ಸ್ವ್ಯಾಬ್ ಪರೀಕ್ಷೆಯಲ್ಲಿ ಸದ್ಯ ಒಬ್ಬರಿಗೆ ಸೋಂಕು ಪ್ರಕರಣ ದೃಢಪಟ್ಟಿದೆ. ಆದ್ದರಿಂದ ಜಿಲ್ಲಾಧಿಕಾರಿ ನಿರ್ದೇಶನದಂತೆ ರಾಮತೀರ್ಥ ಗ್ರಾಮದ ಸೋಂಕಿತನ ನಿವಾಸದ ಬೀದಿಯನ್ನು ಸೀಲ್​ಡೌನ್ ಮಾಡಲಾಗಿದೆ. ಈ ಬೀದಿಯಲ್ಲಿನ ಕೆಲವರನ್ನು ಸ್ವ್ಯಾಬ್ ಪರೀಕ್ಷೆಗೂ ಒಳಪಡಿಸಲಾಗುತ್ತದೆ ಎಂದರು.