ಮೈಸೂರು: ಇತ್ತೀಚೆಗೆ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. 6,900 ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4 ಸಾವಿರ ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆಯೂ ಹಾನಿಯಾಗಿದೆ. 6 ಮನೆಗಳು ಕುಸಿದಿವೆ. 60 ಮನೆಗಳ ಗೋಡೆ ಬಿದ್ದಿದೆ. ಬಿದ್ದು ಹೋಗಿರುವ ಮನೆಗಳಿಗೆ 50 ಸಾವಿರ ರೂ. ಮತ್ತು ಗೋಡೆ ದುರಸ್ತಿಗೆ 25 ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ಅತಿವೃಷ್ಟಿ ಬಗ್ಗೆ ಸರ್ಕಾರಕ್ಕೆ ಬೇಕಿದರೆ ಸಲಹೆ ನೀಡಲಿ. ಅದನ್ನು ಬಿಟ್ಟು ರಾಜಕೀಯಕ್ಕಾಗಿ ಮುಂದಾದರೆ ಅದಕ್ಕೆ ಉತ್ತರ ಇಲ್ಲ ಎಂದರು.
ಮೈಸೂರು ಅರಮನೆ ಮಂಡಳಿ ಕಚೇರಿ ಮೇಲೆ ದಾಳಿ ನಡೆಸಿ ಲೋಕಾಯುಕ್ತರು ತನಿಖೆ ಮಾಡುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಡಾ.ಯತೀಂದ್ರಗೆ ವಿಧಾನಪರಿಷತ್ ಟಿಕೆಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಾ.ಎಚ್.ಸಿ.ಮಹದೇವಪ್ಪ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರವನ್ನು ತಂದೆಗಾಗಿ ತ್ಯಾಗ ಮಾಡಿದ್ದಾರೆ. ಹೈಕಮಾಂಡ್ ಆಗ ನೀವು ಸ್ಪರ್ಧೆ ಮಾಡಬೇಡಿ, ನಿಮ್ಮ ತಂದೆ ಸ್ಪರ್ಧೆ ಮಾಡಲಿ ಎಂದು ಹೇಳಿತ್ತು. ಅದಕ್ಕೆ ಅವರು ತಲೆ ಬಾಗಿದ್ದರು. ಹೀಗಾಗಿ ಇವತ್ತಿನ ಸಂದರ್ಭದಲ್ಲೂ ಅವರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಸರ್ಕಾರ ಇರುವ ಕಾರಣ ವಿಧಾನಪರಿಷತ್ ಟಿಕೆಟ್‌ಗೆ ಲಾಬಿ ಕೂಡ ಹೆಚ್ಚು. ಅಲ್ಲದೆ, ಪರಿಷತ್ ವಿಚಾರದಲ್ಲಿ ಯಾವಾಗಲೂ ಲಾಬಿ ಇದ್ದೇ ಇರುತ್ತದೆ ಎಂದರು.