ಜಿಲ್ಲೆ

69 ಸಮಾಜಗಳ ಸ್ಮಶಾನ ಅಭಿವೃದ್ಧಿ ಅಧೋಗತಿ

ಹಿರೇಕೆರೂರ: ಪಟ್ಟಣದಲ್ಲಿ ವೀರಶೈವ, ನಾಮದೇವ ಸಿಂಪಿಗಿ, ಬ್ರಾಹ್ಮಣ ಸಮಾಜ ಹೊರತುಪಡಿಸಿ ವಾಲ್ಮೀಕಿ, ದಲಿತರು, ಕುರುಬರು, ಆರ್ಯ ವೈಶ್ಯ, ಮಡಿವಾಳರ, ಭೋವಿ ವಡ್ಡರ ಸೇರಿ ಒಟ್ಟು 69 ಸಮಾಜಗಳ ಸ್ಮಶಾನ ಭೂಮಿ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ಕೂಡಲೆ ಇವುಗಳನ್ನು ಅಭಿವೃದ್ಧಿಪಡಿಸುವಂತೆ ಸಮಾಜದ ಜನರು ಆಗ್ರಹಿಸುತ್ತಿದ್ದಾರೆ.

ಪಟ್ಟಣದಿಂದ 2 ಕಿ.ಮೀ. ದೂರದಲ್ಲಿನ ಹೆಸ್ಕಾಂ ಇಲಾಖೆಯ ಹಿಂಭಾಗದಲ್ಲಿ 2 ಎಕರೆ 15 ಗುಂಟೆ ವಿಸ್ತೀರ್ಣದಲ್ಲಿ 69 ಸಮಾಜಗಳ ಸ್ಮಶಾನವಿದ್ದು, ಈ ಎಲ್ಲ ಸಮಾಜದವರು ಮರಣ ಹೊಂದಿದವರನ್ನು ಇಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಪಟ್ಟಣದಿಂದ ಸ್ಮಶಾನಕ್ಕೆ ಹೋಗುವ 1.4 ಕಿ.ಮೀ ರಸ್ತೆ ಇಲ್ಲಿಯವರೆಗೆ ಡಾಂಬರೀಕರಣ ಮಾಡದೆ ಇರುವುದರಿಂದ ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗಿದೆ ಹಾಗೂ ಈ ಸ್ಥಳ ತಗ್ಗು ಪ್ರದೇಶವಾಗಿದ್ದರಿಂದ ನೀರು ನಿಂತು ಕೆರೆಯಂತಾಗಿದೆ.

ಯಾವ ಸೌಲಭ್ಯಗಳೂ ಇಲ್ಲಿಲ್ಲ: ಸ್ಮಶಾನ ಎಂದರೆ ವಿದ್ಯುತ್, ನೀರು ಹಾಗೂ ಶವ ಸುಡಲು ಶೆಡ್ ಬೇಕೆ ಬೇಕು. ಆದರೆ, ಇದೆಲ್ಲವೂ ಇಲ್ಲಿ ಕೇವಲ ಕಾಗದದಲ್ಲಿ ಮಾತ್ರ ಇದೆ ಹೊರತು ಸ್ಮಶಾನದಲ್ಲಿ ಯಾವ ಸೌಲಭ್ಯ ಇಲ್ಲ. ಶವಸಂಸ್ಕಾರಕ್ಕೆ ಆಗಮಿಸುವ ಜನತೆಗೆ ಕುಳಿತುಕೊಳ್ಳಲು ಆಸನವಿಲ್ಲ. ಸುತ್ತಲೂ ಕಾಂಪೌಂಡ್ ನಿರ್ವಿುಸಿಲ್ಲ ಹೀಗೆ ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆ ಇದ್ದು, ಇಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿ ಇದೆ.

ಈ ಕುರಿತು ತಹಸೀಲ್ದಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಅನೇಕ ಭಾರಿ ಮನವಿ ಸಲ್ಲಿಸಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ದೂರು. ಈ ಬಗ್ಗೆ ಜನಪ್ರನಿಧಿಗಳು ಆದಷ್ಟು ಬೇಗನೆ ಗಮನಹರಿಸಿ ಇಲ್ಲಿಗೆ ಮೂಲ ಸೌಕರ್ಯ ಒದಗಿಸುವಂತೆ ಸಮಾಜದವರ ಒತ್ತಾಸೆಯಾಗಿದೆ.

ಕೃಷಿ ಸಚಿವ ಬಿ.ಸಿ.ಪಾಟೀಲರು ಪಟ್ಟಣದಲ್ಲಿ ತುರ್ತು ಮೂಲ ಸೌಕರ್ಯಗಳ ಪಟ್ಟಿ ತಯಾರಿಸುವಂತೆ ಸೂಚಿಸಿದ್ದರು. ಅದರಂತೆ ಇಲ್ಲಿನ 1.4. ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಸೇರ್ಪಡೆ ಮಾಡಿದ್ದೇವೆ. ಇನ್ನುಳಿದಂತೆ ವಿದ್ಯುತ್ ದೀಪ, ನೀರು, ಸೆಲ್ಟರ್ ನಿರ್ವಣ, ಆಸನದ ವ್ಯವಸ್ಥೆಗೆ ಬಹು ದೊಡ್ಡ ಅನುದಾನ ಬೇಕಾಗುತ್ತದೆ. | ರಾಜಾರಾಮ್ ಪವಾರ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಹಿರೇಕೆರೂರ