ಜಿಲ್ಲೆ

ತುಮಕೂರು ಜಿಲ್ಲೆಯಲ್ಲಿ ಗುರುವಾರ 69 ಮಂದಿಗೆ ಸೋಂಕು ; 7 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

Tumakuru

ತುಮಕೂರು: ಜಿಲ್ಲೆಯಲ್ಲಿ ಕರೊನಾ ಆರ್ಭಟ ಸ್ವಲ್ಪಮಟ್ಟಿಗೆ ತಗ್ಗಿದೆ. ಗುರುವಾರ ಒಂದೇ ದಿನ 69 ಮಂದಿಯಲ್ಲಿ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2278ಕ್ಕೇರಿದೆ. ಕರೊನಾ ಮತ್ತಿಬ್ಬರನ್ನು ಬಲಿಪಡೆದಿದೆ.

ತುಮಕೂರು-39, ಕುಣಿಗಲ್-8, ಕೊರಟಗೆರೆ-8, ಚಿಕ್ಕನಾಯಕನಹಳ್ಳಿ-5, ಶಿರಾ-4, ಮಧುಗಿರಿ-2, ಗುಬ್ಬಿ, ಪಾವಗಡ ಹಾಗೂ ತಿಪಟೂರುನಲ್ಲಿ ತಲಾ ಓರ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲಾಸ್ಪತ್ರೆಯಿಂದ 65 ಮಂದಿ ಸಂಪೂರ್ಣವಾಗಿ ಕರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು ಈವರೆಗೆ 1265 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 946 ಸಕ್ರಿಯ ಪ್ರಕರಣಗಳಿದ್ದು, 7 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತಿಬ್ಬರು ಬಲಿ: ಜಿಲ್ಲೆಯಲ್ಲಿ ಮತ್ತಿಬ್ಬರನ್ನು ಕರೊನಾ ಬಲಿಪಡೆದಿದೆ. ಈವರೆಗೆ 67 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಕುಣಿಗಲ್ ತಾಲೂಕಿನ ಹೊಸಪಾಳ್ಯದ 67 ವರ್ಷದ ವೃದ್ಧ ಜ್ವರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು ಆ.4ರಂದು ಕುಣಿಗಲ್ ಸರ್ಕಾರಿ ಆಸ್ಪತ್ರೆ ತರುವ ಮಾರ್ಗಮಧ್ಯೆ ಸಾವನ್ನಪ್ಪಿದ್ದರು. ಗಂಟಲುದ್ರವ ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಿದ್ದು, ಗುರುವಾರ ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಮಾರ್ಗಸೂಚಿಯಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ತುಮಕೂರಿನ ಸಂತೇಪೇಟೆಯ 56 ವರ್ಷದ ಮಹಿಳೆ ಸಹ ಜ್ವರ, ತೀವ್ರ ಉಸಿರಾಟ ತೊಂದರೆ ಅನುಭವಿಸುತ್ತಿದ್ದು ಆ.1 ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. 5ರಂದು ಆರೋಗ್ಯದಲ್ಲಿ ಏರುಪೇರಾಗಿ ಎಸ್‌ಎಸ್‌ಎಂಸಿ ಆಸ್ಪತ್ರೆಗೆ ಬರುವ ಮಾರ್ಗಮಧ್ಯೆ ಮೃತಪಟ್ಟಿದ್ದು ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು ಸೋಂಕು ಇರುವುದು ದೃಢಪಟ್ಟಿದೆ.

ನಾಲ್ವರು ಪತ್ರಕರ್ತರಿಗೆ ಸೋಂಕು: ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್‌ನಲ್ಲಿ ತುಮಕೂರಿನ ನಾಲ್ವರು ಪತ್ರಕರ್ತರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲಾ ಆರೋಗ್ಯ ಇಲಾಖೆ ನಗರದಲ್ಲಿ ಪತ್ರಕರ್ತರಿಗೆ ನಡೆಸಿದ ಕರೊನಾ ಪರೀಕ್ಷೆಯಲ್ಲಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದ್ದು ರೋಗಲಕ್ಷಣಗಳಿಲ್ಲದ ಎಲ್ಲರನ್ನೂ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ.