ಜಿಲ್ಲೆ

ಬಿಬಿಎಂಪಿ ಕಚೇರಿಯಲ್ಲಿ 68ನೇ ಕನ್ನಡ ರಾಜ್ಯೋತ್ಸವ ಸಂಭ್ರಮ

ಆರ್.ತುಳಸಿಕುಮಾರ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಯಲ್ಲಿ ಬುಧವಾರ ಬೆಳಗ್ಗೆಯೇ ಹಳದಿ, ಕೆಂಪು ಬಣ್ಣದ ಕನ್ನಡ ಬಾವುಟಗಳು ಹಾರಾಡಿದವು. ಬಂಟಿಂಗ್ಸ್, ತಳಿರು ತೋರಣಗಳಿಂದ ಸಿಂಗಾರಗೊಂಡು ಇಡೀ ಪಾಲಿಕೆಯ ಆವರಣ ಕನ್ನಡ ವಾತಾವರಣಕ್ಕೆ ತಿರುಗಿತ್ತು.

ಕೇಂದ್ರ ಕಚೇರಿಯ ಮುಂಭಾಗದಲ್ಲಿ ಕೆಂಪು ಮತ್ತು ಹಳದಿ ಬಣ್ಣದಲ್ಲಿ ಕರ್ನಾಟಕದ ನಕ್ಷೆಯ ರಂಗೋಲಿಯನ್ನು ಬಿಡಿಸಿ ಕರ್ನಾಟಕ ಸಂಭ್ರಮ-50 ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯದ ಬರಹ ಬರೆಯಲಾಗಿತ್ತು. ಜತೆಗೆ ಕನ್ನಡ ಗೀತೆಗಳ ಕಲರವ ಅಧಿಕಾರಿ, ಸಿಬ್ಬಂದಿಯನ್ನು ಪುಳಕಗೊಳಿಸಿತು.

ಇಂತಹ ಕನ್ನಡಮಯ ವಾತಾವರಣದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕನ್ನಡಾಂಬೆ ಭುವನೇಶ್ವರಿದೇವಿಯ ಭಾವಚಿತ್ರ ಪುಷ್ಪಾರ್ಚನೆ ಮಾಡಿ ನಮಿಸಿದರು. ಇದರ ಬೆನ್ನಲ್ಲೇ ಕನ್ನಡ ಧ್ವಜವನ್ನು ಹಾರಿಸಿ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ರಾಷ್ಟ್ರಗೀತೆ, ನಾಡಗೀತೆಯನ್ನು ಹಾಡಿ ಗೌರವ ಸೂಚಿಸಲಾಯಿತು.

ಗಮನ ಸೆಳೆದ ಕನ್ನಡ ಗೀತೆಗಳ ಗಾಯನ:

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಂತರ 5 ಕನ್ನಡ ಗೀತೆಗಳನ್ನು ಹಾಡುವ ಮೂಲಕ ನುಡಿ ನಮನ ಸಲ್ಲಿಸಲಾಯಿತು. ‘ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು . . .’, ‘ಎಲ್ಲಾದರು ಇರು ಎಂತಾದರು ಇರು’, ‘ಒಂದೇ ಒಂದೇ ಕರ್ನಾಟಕ ಒಂದೇ’, ‘ಹೊತ್ತಿತೋ ಹೊತ್ತಿತೋ ಕನ್ನಡದ ದೀಪ, ಹಾಗೂ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಗೀತೆಗಳನ್ನು ಶುಶ್ರಾವ್ಯವಾಗಿ ಹಾಡಲಾಯಿತು. ಗಾಯಕರ ಜತೆಗೆ ಅಧಿಕಾರಿ, ಸಿಬ್ಬಂದಿಗಳು ಐದೂ ಗೀತೆಗಳನ್ನು ಹಾಡಿ ಗಮನ ಸೆಳೆದರು.

ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಶಿವಾನಂದ ಕಲ್ಕೆರಿ, ಡಾ. ಕೆ. ಹರೀಶ್ ಕುಮಾರ್, ರೆಡ್ಡಿ ಶಂಕರ ಬಾಬು, ಪ್ರೀತಿ ಗೆಹ್ಲೋಟ್, ಪೂರ್ವ ವಲಯ ಆಯುಕ್ತರಾದ ಸ್ನೇಹಲ್, ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರಹ್ಲಾದ್ ಸೇರಿದಂತೆ ಇನ್ನಿತರರಿದ್ದರು.

ನಾಡಿನ ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಭಾಷೆ ಬಗ್ಗೆ ಹೆಚ್ಚು ಅಭಿಮಾನವನ್ನು ಇಟ್ಟುಕೊಳ್ಳಬೇಕು. ಕನ್ನಡ ಪುಸ್ತಕಗಳನ್ನು ಓದಬೇಕು. ಕಲೆಗಳಿಗೆ ಪ್ರೋತ್ಸಾಹ ನೀಡಬೇಕು. ಈ ಮೂರೂ ವಿಷಯಗಳಿಗೆ ಆದ್ಯತೆ ನೀಡಿದೆ ಕನ್ನಡ ಬೆಳವಣಿಗೆ ಸಾಧ್ಯ. ಪಾಲಿಕೆ ಕೂಡ ತನ್ನ ಆಡಳಿತದಲ್ಲಿ ಕನ್ನಡವನ್ನೇ ಬಳಸುತ್ತಿದೆ. ಈ ವರ್ಷವೂ ಬೆಂಗಳೂರು ಸಂಸ್ಕೃತಿ ಹಬ್ಬ ಆಚರಿಸುವ ಚಿಂತನೆ ಇದೆ.

- ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ