ವಿಕ್ರಮ ನಾಡಿಗೇರ ಧಾರವಾಡ ಪ್ರಸಕ್ತ ಸಾಲಿಕ ಶೈಕ್ಷಣಿಕ ವರ್ಷ (2025-26ನೇ ಸಾಲಿನ)ದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಶಾಲೆ ಆರಂಭದ ಸಮಯದಲ್ಲೇ ಮಕ್ಕಳ ಕೈಗೆ ಪಠ್ಯಪುಸ್ತಕ ತಲುಪಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸನ್ನದ್ಧವಾಗಿದೆ. ಇಡೀ ರಾಜ್ಯದಲ್ಲಿ ಬೇಡಿಕೆಯ ಶೇ. 68ರಷ್ಟು ಪಠ್ಯಪುಸ್ತಕಗಳನ್ನು ಪೂರೈಸಲಾಗಿದೆ. ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಮೇ 29ರಕ್ಕೆ ಆರಂಭವಾಗಲಿದೆ. ಅದಕ್ಕಾಗಿ ಶಿಕ್ಷಣ ಇಲಾಖೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಜಿಲ್ಲೆಗಳ ಡಿಡಿಪಿಐಗಳಿಗೂ ಸೂಚನೆ ನೀಡಿದೆ. ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕ ತಲುಪಿಸುವ ಗುರಿಯನ್ನು ಇಲಾಖೆ ಹೊಂದಿದ್ದು, ಅದಕ್ಕೆ ಅನುಗುಣವಾಗಿ ಪುಸ್ತಕ ಪೂರೈಕೆ ಪ್ರಯತ್ನ ನಡೆಸಿದೆ. ರಾಜ್ಯದಲ್ಲಿ 7,57,34,241 ಉಚಿತ ಪಠ್ಯಪುಸ್ತಕಗಳು ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಮಾರಾಟಕ್ಕಾಗಿ 3,75,84,645 ಸೇರಿ ಒಟ್ಟು 11,33,18,886 ಪಠ್ಯಪುಸ್ತಕಗಳ ಅಗತ್ಯವಿದೆ. ಅದರಂತೆ ಈಗಾಗಲೇ ಉಚಿತ ವಿತರಣೆಯಲ್ಲಿ 4,23,51,062 (ಶೇ.66.80) ಹಾಗೂ ಮಾರಾಟಕ್ಕಾಗಿ 2,66,57,581 (71.66) ಸೇರಿ ಒಟ್ಟು 6,90,08,643 ಪಠ್ಯಪುಸ್ತಕಗಳನ್ನು ಪೂರೈಸಲಾಗಿದ್ದು, ಶಾಲೆಗಳಿಗೆ ತಲುಪಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಪಠ್ಯಪುಸ್ತಕಗಳ ಪೂರೈಕೆ ಆಗಿಲ್ಲ ಎಂಬ ಆರೋಪ ಪ್ರತಿ ವರ್ಷ ಕೇಳುತ್ತಲೇ ಇದೆ. ಆದರೆ ಈ ಬಾರಿ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಶಾಲೆ ಆರಂಭಕ್ಕೂ ಮುಂಚಿತವಾಗಿಯೇ ಬೇಡಿಕೆಯ ಅರ್ಧಕ್ಕಿಂತ ಹೆಚ್ಚು ಪಠ್ಯಪುಸ್ತಕಗಳನ್ನು ಪೂರೈಸಿರುವುದು ಎಲ್ಲರಿಗೂ ಆಶ್ವರ್ಯ ಉಂಟು ಮಾಡಿದಂತಾಗಿದೆ.
* ಪ್ರೇಮಾ ಎಚ್.ಎಂ., ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕಿರಾಜ್ಯದಲ್ಲಿ ಉಚಿತವಾಗಿ ವಿತರಿಸುವ ಪಠ್ಯಪುಸ್ತಕಗಳ ಸಂಖ್ಯೆ ಕಡಿಮೆ ಇದ್ದರೆ, ಖಾಸಗಿ ಶಾಲೆಗಳಿಗೆ ಮಾರಾಟಕ್ಕೆ ವಿತರಿಸುವ ಪುಸ್ತಕಗಳ ಸಂಖ್ಯೆ ಹೆಚ್ಚಿದೆ. ಈವರೆಗೆ ಉಚಿತ ಪಠ್ಯಗಳನ್ನು ಶೇ. 66.80 ಹಾಗೂ ಮಾರಾಟದಲ್ಲಿ ಶೇ. 71.66 ಪಠ್ಯಗಳನ್ನು ಪೂರೈಕೆ ಮಾಡಲಾಗಿದೆ.