ದೊಡ್ಡಬಳ್ಳಾಪುರ: 2022-23ನೇ ಸಾಲಿನ ನಗರಸಭಾ ಬಜೆಟ್‌ನಲ್ಲಿ 68.45 ಕೋಟಿ ಬಜೆಟ್ ಮಂಡಿಸುವ ಮೂಲಕ ನಗರಸಭೆ ಅಧ್ಯಕ್ಷೆ ಸುಧಾರಣಿ ಎಸ್ ಲಕ್ಷ್ಮೀನಾರಾಯಣ್, ಮೊದಲ ಬಾರಿಗೆ ಹೆಚ್ಚು ಮೊತ್ತದ ಬಜೆಟ್ ಮಂಡಿಸಿದ ಖ್ಯಾತಿಗೆ ಪಾತ್ರರಾದರು.
ಪರಿಸರ ಸಂರಕ್ಷಿಸಿ ಉದ್ಯಾನವನ ಅಭಿವೃದ್ಧಿಗಾಗಿ 56.35 ಲಕ್ಷ ರೂ. ಮೀಸಲಿಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಡಿ. ಕೊಂಗಾಡಿಯಪ್ಪ ಹಸಿರು ವೃಕ್ಷ ಕಾರ್ಯಕ್ರಮಕ್ಕೆ 20 ಲಕ್ಷ ರೂ. ನೈರ್ಮಲ್ಯ, ಘನ ತ್ಯಾಜ್ಯ ವಸ್ತು ನಿರ್ವಹಣೆಗೆ 2.87 ಕೋಟಿ ರೂ., ಬೀದಿನಾಯಿಗಳ ನಿಯಂತ್ರಣಕ್ಕಾಗಿ 15 ಲಕ್ಷ ರೂ., ಕುಡಿಯುವ ನೀರಿಗಾಗಿ 1.12 ಕೋಟಿ ರೂ. ಹಾಗೂ ಹೊಸದಾಗಿ ಅನುಷ್ಠಾನಗೊಂಡಿರುವ ಒಳಚರಂಡಿ ನಿರ್ವಹಣೆಗೆ 20 ಲಕ್ಷ ರೂ. ಮತ್ತು ದುರಸ್ತಿಗಾಗಿ 70 ಲಕ್ಷ ರೂ. ಮೀಸಲಿಡಲಾಗಿದೆ.
ಅಭಿವೃದ್ಧಿ ಕಾಮಗಾರಿಗಳು: ವಿವಿಧ ರಸ್ತೆ, ಚರಂಡಿಗಳ ನಿರ್ಮಾಣ, ಬೀದಿ ದೀಪ ಅಳವಡಿಕೆಗೆ 10.97 ಕೋಟಿ ರೂ. ಮೀಸಲಿರಿಸಲಾಗಿದೆ. ನೂತನ ಕೆ.ಆರ್.ಮಾರುಕಟ್ಟೆ ನಿರ್ಮಾಣಕ್ಕೆ 1.45 ಕೋಟಿ ರೂ. ಹಾಗೂ ಡಿ.ಕ್ರಾಸ್ ರಸ್ತೆಯಲ್ಲಿ ನೂತನ ವಾಣಿಜ್ಯ ಮಳಿಗೆ ನಿರ್ಮಾಣಕ್ಕಾಗಿ 2.10 ಕೋಟಿ ರೂ.ಮೀಸಲಿಡಲಾಗಿದೆ. ಕೊಂಗಾಡಿಯಪ್ಪ ಬಸ್ ನಿಲ್ದಾಣ ಉನ್ನತೀಕರಣ ಹಾಗೂ ನಗರಸಭಾ ಕಚೇರಿ ಆವರಣದಲ್ಲಿ ಕೊಂಗಾಡಿಯಪ್ಪ ಪುತ್ಥಳಿ ನಿರ್ಮಾಣಕ್ಕೆ 25 ಲಕ್ಷ ರೂ.ತೆಗೆದಿಡಲಾಗಿದೆ.
ವಿಶೇಷ ಕಾರ್ಯಕ್ರಮಗಳು: ನೇಕಾರ ಭವನ ನಿರ್ಮಾಣಕ್ಕಾಗಿ 20 ಲಕ್ಷ ರೂ. ನಗರಸಭೆ ಒಳಚರಂಡಿ ನೀರಿನ ಶುಧ್ಧಿಕರಣಕ್ಕಾಗಿ 75 ಲಕ್ಷ ರೂ. ಎಸ್‌ಟಿಪಿ ಘಟಕ ಮೇಲ್ದರ್ಜೆಗೆರಿಸಲು 2.78 ಕೋಟಿ ರೂ. ಟ್ರಾಫಿಕ್ ಸಿಗ್ನಲ್ ದೀಪ ಮತ್ತು ಸಿಸಿ ಕ್ಯಾಮರಾ ಅಳವಡಿಕೆಗೆ 40 ಲಕ್ಷ ರೂ.ಮೀಸಲಿಡಲಾಗಿದೆ.
ಬಜೆಟ್ ಕೇವಲ ಪ್ರತಿಯಲ್ಲಿ ಉಳಿಯದೆ ಕೃತಿಯಾಗಿ ಬದಲಾಗಬೇಕು, ಎಲ್ಲ ವಾರ್ಡ್‌ಗಳಲ್ಲಿ ಕೆಲಸಗಳನ್ನು ಸಮಾನವಾಗಿ ಹಂಚಿಕೆ ಮಾಡಬೇಕು. ನಗರದ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ವಡ್ಡರಹಳ್ಳಿ ರವಿ, ಸದಸ್ಯ ನಗರಸಭಾ ಸದಸ್ಯರು ಹಲವು ಸಲಹೆ ಹಾಗೂ ಆಗಬೇಕಾದ ಕೆಲಸಗಳ ಬಗ್ಗೆ ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾಲಹರಣ ಮಾಡದೆ, ಎಲ್ಲ ಅಧಿಕಾರಿ ವರ್ಗದವರು ಸಂಘಟಿತರಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಲಿದ್ದೇವೆ. ಶಿವಶಂಕರ್, ಪೌರಾಯುಕ್ತ