ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು. 
ಜಿಲ್ಲೆ

ವಿಜಯಪುರದಲ್ಲಿ 67ನೇ ಕನ್ನಡ ರಾಜ್ಯೋತ್ಸವ

ವಿಜಯಪುರ: ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಭಾಷೆ ಬಳಕೆ ಪ್ರಮಾಣ ಹೆಚ್ಚುತ್ತಿರುವುದು ಅಭಿಮಾನದ ಸಂಕೇತವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ 67ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರಸ್ತುತ ಇಂಗ್ಲಿಷ್ ಭಾಷೆ ಜ್ಞಾನ ಅವಶ್ಯಕವಾಗಿದ್ದರೂ ಎಂದಿಗೂ ನಮ್ಮ ಮಾತೃ ಭಾಷೆ ಕನ್ನಡವೇ ಆಗಿದೆ. ಚಲನಚಿತ್ರರಂಗ, ಲಲಿತಕಲೆ, ವಾಸ್ತುಶಿಲ್ಪ, ಧರ್ಮ, ತತ್ತ್ವಜ್ಞಾನ, ವಿಜ್ಞಾನ-ತಂತ್ರಜ್ಞಾನ, ಇಂಟರ್‌ನೆಟ್, ಉದ್ಯೋಗ-ಕೌಶಲಾಭಿವೃದ್ಧಿ, ವಾಣಿಜ್ಯ-ವ್ಯವಹಾರ, ಸಾಮಾಜಿಕ ಜಾಲತಾಣ, ಮಧ್ಯಮ ಮತ್ತು ಭಾರಿ ಕೈಗಾರಿಕೆ ಕೇಂದ್ರಗಳಲ್ಲೂ ಕನ್ನಡ ಬಳಕೆಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಬುದ್ಧ, ಬಸವ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಶರಣರು, ಸಂತರು, ಸೂಫಿಗಳು, ದಾರ್ಶನಿಕರು ತೋರಿದ ಮಾರ್ಗದಲ್ಲಿ ಸಾಗಿ ಬಂದ ಕನ್ನಡ ನಾಡು ವಿವಿಧತೆಯಲ್ಲಿ ಏಕತೆಯ ತತ್ತ್ವಕ್ಕೆ ಬದ್ಧವಾಗಿ ನಡೆದುಕೊಂಡು ದೇಶದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಆರ್ಥಿಕ, ರಾಜಕೀಯ, ವೈಜ್ಞಾನಿಕ ಹಾಗೂ ಬೌದ್ಧಿಕ ಕ್ಷೇತ್ರಗಳಿಗೆ ಅನನ್ಯ ಕೊಡುಗೆ ನೀಡಿ ‘ಆತ್ಮನಿರ್ಭರ ಭಾರತ’ ನಿರ್ಮಾಣದ ಕನಸನ್ನು ಸಾಕಾರಗೊಳಿಸುತ್ತಿದೆ ಎಂದು ಹೇಳಿದರು.

ಅಪಾರ ಕೊಡುಗೆ: ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ನಾಡನ್ನಾಳಿದ ಮೌರ್ಯ, ಶಾತವಾಹನ, ಸೇವುಣ, ಗಂಗ, ಕದಂಬ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ಚೋಳ, ಚೇರ, ಪಲ್ಲವ ಮತ್ತು ವಿಜಯನಗರ ಅರಸು ಮನೆತನಗಳ ಅವಧಿಯಲ್ಲಿ ಕನ್ನಡ ಭಾಷೆ ವಿಭಿನ್ನ ಆಯಾಮಗಳಲ್ಲಿ ಅಭಿವೃದ್ಧಿ ಹೊಂದಿದೆ. ಬಹುಮನಿ ಆದಿಲ್ ಶಾಹಿ, ಬರೀದ ಶಾಹಿ ಸಾಮ್ರಾಜ್ಯಗಳ ಸುಲ್ತಾನರು, ಮೈಸೂರಿನ ಒಡೆಯರು, ಹೈದರ್ ಅಲಿ, ಟಿಪ್ಪು ಸುಲ್ತಾನರು ಮತ್ತು ಮರಾಠ ಪೇಶ್ವೆಗಳಂತಹ ಮನೆತನಗಳ ಸಾಮ್ರಾಟರು, ಆಡಳಿತಗಾರರು ಆಂಗ್ಲರ ಆಡಳಿತದ ಹಸ್ತಕ್ಷೇಪದ ಹೊರತಾಗಿಯೂ ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿದ್ದರು ಎಂದರು.

ಕನ್ನಡಿಗರ ಕಣ್ಮಣಿ ವೀರಮಾತೆ ರಾಣಿ ಕಿತ್ತೂರು ಚನ್ನಮ್ಮ, ಕೆಳದಿಯ ಸಾಮ್ರಾಜ್ಞೆ ಚನ್ನಮ್ಮ, ಚಿತ್ರದುರ್ಗ ಮತ್ತು ಸುರಪುರದ ನಾಯಕರು, ವೀರವನಿತೆ ಒನಕೆ ಓಬವ್ವ, ಶಿವಮೊಗ್ಗದ ಈಸೂರಿನ ನಾಡ ಪ್ರೇಮಿಗಳು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಗಂಗಾಧರರಾಯ ದೇಶಪಾಂಡೆ ಮತ್ತು ಗಾಂಧೀವಾದಿ ಹರ್ಡೇಕರ್ ಮಂಜಪ್ಪ ಮತ್ತಿತರರು ಕನ್ನಡ ನಾಡಿನ ಹಿತರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ಹೋರಾಡಿದ್ದಾರೆ. ಅನೇಕ ಕನ್ನಡ ಪ್ರೇಮಿಗಳ ಸಂಘಟಿತ ಹೋರಾಟದಿಂದ ಕನ್ನಡಿಗರಲ್ಲಿ ಭಾಷಾಭಿಮಾನ ಜಾಗೃತಗೊಂಡು ಕರ್ನಾಟಕ ಏಕೀಕರಣ ಚಳವಳಿ ತೀವ್ರಗೊಂಡಿತು ಎಂದರು.

ವಿಜಯಪುರ ಕೊಡುಗೆ: ವಿಜಯಪುರದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ, ಚಿಕ್ಕೋಡಿ ತಮ್ಮಣ್ಣಪ್ಪ, ಹನುಮಂತರಾಯ ಮೊಹರೆ, ರಾಜಾರಾಮ ದುಬೆ, ಚನ್ನಬಸಪ್ಪ ಅಂಬಲಿ, ವಾಲಿ ಚನ್ನಪ್ಪ, ವೀರಭದ್ರಪ್ಪ ಶಿರೂರು, ಚಿನ್ಮಯಸ್ವಾಮಿ ಓಂಕಾರಮಠ, ಪಟ್ಟಣ ಮಹಾದೇವಪ್ಪ, ಹಲಸಂಗಿಯ ಮಧುರಚೆನ್ನರು, ಚಡಚಣದ ಸಿಂಪಿ ಲಿಂಗಣ್ಣನವರು, ಬೆನಗಲ್ಲ ರಾಮರಾಯರು ಮತ್ತು ಬಿ. ಶಿವಮೂರ್ತಿ ಶಾಸ್ತ್ರಿ ಮತ್ತಿತರರು ಕನ್ನಡ ಚಳವಳಿಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.

ಹಲಸಂಗಿಯ ಗೆಳೆಯರ ಬಳಗ ಎಕ್ಸಂಬಾದ ಕನ್ನಡ ಸಂಘ ಮತ್ತು ಗಡಿ ಪ್ರದೇಶಗಳಲ್ಲಿ ಕ್ರಿಯಾಶೀಲವಾಗಿದ್ದ ಕನ್ನಡಪರ ಸಂಘಟನೆಗಳ ಕಾಣಿಕೆಯೂ ಪ್ರಶಂಸನೀಯವಾಗಿದೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ, ಎಸ್ಪಿ ಎಚ್.ಡಿ.ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಎಎಸ್ಪಿ ಡಾ.ರಾಮ ಅರಸಿದ್ದಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗತ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಂಕರಗೌಡ ಸೋಮನಾಳ, ವಿಜಯಪುರ ತಹಸೀಲ್ದಾರ್ ಸಿದ್ರಾಯ ಬೋಸಗಿ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಅಲ್ಪಸಂಖ್ಯಾತ ಇಲಾಖೆ ಜಿಲ್ಲಾ ಅಧಿಕಾರಿ ಯಲ್ಲಮ್ಮ, ಕ್ರೀಡಾಧಿಕಾರಿ ಎಸ್.ಜಿ.ಲೋಣಿ ಮತ್ತಿತರರಿದ್ದರು.

ಆಕರ್ಷಕ ಪಥಸಂಚಲನ
ಡಿಎಆರ್ ಡಿಎಸ್‌ಪಿ ಡಿ.ಎಸ್.ಧನಗರ ಹಾಗೂ ಪರೇಡ್ ಕಮಾಂಡರ್ ಸದಾಶಿವ ವನಂಜಕರ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನ ನೆರವೇರಿತು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಐಆರ್‌ಬಿ, ನಾಗರಿಕ ಪೋಲಿಸ್ ಪಡೆ, ಗೃಹರಕ್ಷಕ ದಳ, ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಸೈನಿಕ ಶಾಲೆ, ಎನ್‌ಸಿಸಿ ಪಥಸಂಚಲನ ನೋಡುಗರನ್ನು ಆಕರ್ಷಿಸಿತು.

ಹಿರಿಯ ಸರ್ಕಾರಿ ಬಾಲಕರ ಬಾಲ ಮಂದಿರ, ಕಾಳಿದಾಸ ಶಾಲೆಯ ಭಾರತ ಸೇವಾ ದಳ ತಂಡ, ಸೈನಿಕ ಶಾಲೆ ಕಿರಿಯ, ಕೆಜಿಎಂಪಿಎಸ್ ತೊರವಿ, ಎಚ್‌ಪಿಎಸ್ ಶಾಂತಿನಗರ ತೊರವಿ, ಸೇಂಟ್ ಜೋಸೆಫ್ ಶಾಲೆ, ಕೆಜಿಎಂಪಿಎಸ್ ತೊರವಿ, ರಂಭಾಪುರ ಕೆಬಿಎಸ್ 50, ಪಪೂ ಕಾಲೇಜ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು, ರಂಭಾಪುರ ಜಗಜ್ಯೋತಿ ಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಸೇರಿದಂತೆ ಪೊಲೀಸ್ ವಾದ್ಯ ವೃಂದದ ಪಥಸಂಚಲನ ಹಾಗೂ ಶಿಸ್ತುಬದ್ಧ ನಡಿಗೆ ಕ್ರೀಡಾಂಗಣದಲ್ಲಿ ಭಾಗಿಯಾದ ಕನ್ನಡಿಗರ ಮನ ಗೆದ್ದಿತು.

ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗತ್ತಿ ನೇತೃತ್ವದಲ್ಲಿ ಭಾಗಿಯಾದ 50ಕ್ಕೂ ಹೆಚ್ಚು ನಿವೃತ್ತ ಮಾಜಿ ಸೈನಿಕರು, ಅಧಿಕಾರಿಗಳ ಶಿಸ್ತುಬದ್ಧತೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೆರೆದ ಎಲ್ಲ ಜನರ ಗೌರವ ಇಮ್ಮಡಿಗೊಳಿಸಿತು.

ಸಾಧಕರಿಗೆ ಸನ್ಮಾನ
ಕರ್ನಾಟಕ ರಾಜ್ಯೋತ್ಸವ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು. ವಿವೇಕಾನಂದ ಕಲ್ಯಾಣಶೆಟ್ಟಿ, ಚಂದ್ರಕಾಂತ ಬಿಜ್ಜರಗಿ (ಸಾಹಿತ್ಯ), ಮಳಸಿದ್ದಪ್ಪ ನಾಯ್ಕೋಡಿ, ನಿತೀನ ರುಣವಾಲ (ಸಮಾಜ ಸೇವೆ), ವೀಣಾ ಥಿಟೆ, ಪ್ರಕಾಶಸಿಂಗ್ ರಜಪೂತ (ಸಂಗೀತ), ಅಂಬಣ್ಣ ತಳವಾರ ಹಾಗೂ ನಾಗಲಿಂಗಪ್ಪ ಕಂಬಾರ (ಜಾನಪದ), ಶಾಂತಪ್ಪ ಕೋಟಿ, ಅಪ್ಪಾಸಾಬ ಕನ್ನೂರ (ಬಯಲಾಟ), ಬಾಲಚಂದ್ರ ಬೆಕಿನಾಳ, ವಿದ್ಯಾಧರ ಸಾಲಿ (ಚಿತ್ರಕಲೆ), ಡಾ.ಮಹಾಂತೇಶ ಗುಬ್ಬೇವಾಡ (ಶಿಕ್ಷಣ), ಸಚ್ಚೇಂದ್ರ ಲಂಬು, ಪ್ರದೀಪ ಕುಲಕರ್ಣಿ (ಪತ್ರಿಕೋದ್ಯಮ), ವಿನಾಯಕ ಗುನ್ನಾಪುರ, ಅನ್ನಪೂರ್ಣ ಬೋಸಲೆ (ಕ್ರೀಡೆ), ರಾಜಯೋಗಿ ಬ್ರಹ್ಮಕುಮಾರ ಗಂಗಾಧರ ಅಣ್ಣನವರು, ಫಾದರ್ ಟಿಯೋಲ್ ಮಚಾದೋ, ವಿ.ಸಿ.ನಾಗಠಾಣ (ಸಂಕೀರ್ಣ ಕ್ಷೇತ್ರ) ಸೇರಿದಂತೆ 20 ಜನರನ್ನು ಸನ್ಮಾನಿಸಲಾಯಿತು.

ಶಾಲಾ ಮಕ್ಕಳಿಂದ ಯೋಗ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾದ ಭುವನೇಶ್ವರಿ ದೇವಿ ಭಾವಚಿತ್ರ ಹಾಗೂ ವಿವಿಧ ಇಲಾಖೆಯ ಸ್ತಬ್ಧ ಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಎಸ್ಪಿ ಎಚ್.ಡಿ.ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ ಚಾಲನೆ ನೀಡಿದರು.

ಮೆರವಣಿಗೆಯಲ್ಲಿ ಸಾರವಾಡ ಕಲಾವಿದರಿಂದ ಗೊಂಬೆ ಕುಣಿತ, ಬಬಲೇಶ್ವರದ ಪೂಜಾರಿ ತಂಡದಿಂದ ಕರಡಿ ಮಜಲು, ತಿಕೋಟಾದ ಸಿದ್ದಾಪುರ ಕಲಾವಿದರಿಂದ ಸತ್ತಿಗೆ ಕುಣಿತ, ವಿಜಯಪುರದ ಸ್ಥಳೀಯ ಕಲಾವಿದರಿಂದ ತಾಸಿರಂಡೋಲ್, ಸಾರವಾಡದ ರಾವುತಪ್ಪ ಹಾಗೂ ತಂಡದಿಂದ ಕುದುರೆ ಮತ್ತು ನವಿಲು ಕುಣಿತ ಪ್ರದರ್ಶಿಸಲಾಯಿತು.