ಜಿಲ್ಲೆ

ಸೂರ್ಯಕಾಂತಿಗೆ 6,760 ರೂ. ಬೆಂಬಲ ಬೆಲೆ

ಲಕ್ಷ್ಮೇಶ್ವರ: ಕೇಂದ್ರ ಸರ್ಕಾರದ ಸೂರ್ಯಕಾಂತಿಗೆ 6,760 ರೂ. ಬೆಂಬಲ ಬೆಲೆ ಘೋಷಿಸಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್. ತಿಳಿಸಿದ್ದಾರೆ.

ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಹಾಗೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಜಿಲ್ಲೆಯಲ್ಲಿ ಕೆಒಎಫ್‌ನ ಸಹಕಾರಿ ಸಂಘಗಳನ್ನು ಖರೀದಿ ಕೇಂದ್ರಗಳೆಂದು ಪರಿಗಣಿಸಲಾಗಿದೆ. ಗದಗ ತಾಲೂಕಿನ ಬಳಗಾನೂರ, ಹೊಂಬಳ, ಹುಲಕೋಟಿ, ಶಿರಹಟ್ಟಿ ತಾಲೂಕಿನ ರಣತೂರ, ರೋಣ ತಾಲೂಕಿನ ಅಬ್ಬಿಗೇರಿ, ಸೂಡಿ, ನಿಡಗುಂದಿ, ನರಗುಂದ ತಾಲೂಕಿನ ಕಣಕಿಕೊಪ್ಪ, ಮುಂಡರಗಿ ತಾಲೂಕಿನ ಬರದೂರ ಕಲಕೇರಿ ಸೇರಿ 10 ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಎಕರೆಗೆ 3 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಸೂರ್ಯಕಾಂತಿಯನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದುತಿಳಿಸಿದ್ದಾರೆ.