ಜಿಲ್ಲೆ

ಸಾವಿರ ಸನಿಹಕ್ಕೆ ಬಂದ ಕರೊನಾ ಸೋಂಕು ; ಗುರುವಾರ 67 ಮಂದಿಗೆ ಪಾಸಿಟಿವ್

Tumakuru

ತುಮಕೂರು: ಜಿಲ್ಲೆಯಲ್ಲಿ ಕರೊನಾ ಆರ್ಭಟ ಮಿತಿಮೀರುತ್ತಿದೆ. ಗುರುವಾರ ಒಂದೇ ದಿನ 67 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ ಸಾವಿರ ಸನಿಹಕ್ಕೆ ತಲುಪಿದೆ. ಸ್ಮಾರ್ಟ್‌ಸಿಟಿ ತುಮಕೂರಿನ ಐವರು ಸೋಂಕಿಗೆ ಬಲಿಯಾಗಿದ್ದು ಸತ್ತವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಹತ್ತು ತಾಲೂಕುಗಳಲ್ಲಿ ಕರೊನಾ ಪ್ರಕರಣ ವರದಿಯಾಗಿವೆ. ತುಮಕೂರು ತಾಲೂಕು ಒಂದರಲ್ಲೇ 26 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಗುಬ್ಬಿ 9, ಮಧುಗಿರಿ 7, ಪಾವಗಡ 6, ಕುಣಿಗಲ್ 5, ತುರುವೇಕೆರೆ 5, ಶಿರಾ 4, ಚಿಕ್ಕನಾಯಕನಹಳ್ಳಿ 2, ತಿಪಟೂರು 2 ಹಾಗೂ ಕೊರಟಗೆರೆ ತಾಲೂಕಿನ ಒಬ್ಬರು ಸೇರಿ ಒಟ್ಟು 67 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ

ಸಂಖ್ಯೆ 931ಕ್ಕೆ ಏರಿದೆ.

ಐವರು ಬಲಿ: ಕರೊನಾ ಅಟ್ಟಹಾಸಕ್ಕೆ ಗುರುವಾರ ಒಂದೇ ದಿನ ಐವರು ಬಲಿಯಾಗಿದ್ದು ಭೀತಿ ಹುಟ್ಟಿಸಿದೆ. ತುಮಕೂರು ನಗರದವರೇ ಐವರು ಸೋಂಕು ತಗುಲಿ ಮೃತಪಟ್ಟಿದ್ದಾರೆ. ತುಮಕೂರಿನ ವಾಲ್ಮೀಕಿ ನಗರದ 45 ವರ್ಷದ ವ್ಯಕ್ತಿ, ಬಾರ್‌ಲೈನ್ ರಸ್ತೆಯ 26 ವರ್ಷದ ಮಹಿಳೆ, ಮೆಳೆಕೋಟೆಯ 65 ವರ್ಷದ ವೃದ್ಧೆ, ಎಸ್‌ಐಟಿ ಬಡಾವಣೆಯ 64 ವರ್ಷದ ವೃದ್ಧ ಹಾಗೂ ಮೆಳೆಕೋಟೆಯ 65 ವರ್ಷದ ಮತ್ತೊಬ್ಬ ವೃದ್ಧೆ ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದು ಎಲ್ಲರ ಅಂತ್ಯಸಂಸ್ಕಾರವನ್ನು ಕೋವಿಡ್ ಮಾರ್ಗಸೂಚಿಯಂತೆ ನೆರವೇರಿಸಲಾಗಿದೆ.

400 ಸೋಂಕಿತರು: ಜಿಲ್ಲಾ ಕೇಂದ್ರ ತುಮಕೂರು ತಾಲೂಕು ಒಂದರಲ್ಲೇ ಸೋಂಕಿತರ ಸಂಖ್ಯೆ 400ಕ್ಕೇರಿದೆ. ಈವರೆಗೆ 182 ಮಂದಿ ಗುಣಮುಖರಾಗಿದ್ದು 194 ಸಕ್ರಿಯ ಪ್ರಕರಣಗಳಿವೆ. ಈವರೆಗೆ 24 ಸೋಂಕಿತರು ಸಾವನ್ನಪ್ಪಿದ್ದಾರೆ. ರೋಗ ಲಕ್ಷಣಗಳು ಕಂಡ ತಕ್ಷಣವೇ ಆಸ್ಪತ್ರೆಗೆ ತೆರಳಿ ಪರೀಕ್ಷೆಗೊಳಪಟ್ಟು ಚಿಕಿತ್ಸೆ ಪಡೆಯದೇ ಇದ್ದ್ದುದ್ದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ಕರೊನಾ ಗೆದ್ದ ಶಾಸಕರಿಂದ ಸೋಂಕಿತರ ಭೇಟಿ!: ಕರೊನಾ ಸೋಂಕಿನಿಂದ ಗುಣಮುಖರಾದ ಜಿಲ್ಲೆಯ ಶಾಸಕರೊಬ್ಬರು ಗುರುವಾರ ಕೋವಿಡ್ ಕೇರ್ ಸೆಂಟರ್‌ಗೆ ತೆರಳಿ ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು. ತಾಲೂಕಿನ ಎಡೆಯೂರು ಹೋಬಳಿ ಮಾದನಾಯಕನಹಳ್ಳಿ ಮುರಾರ್ಜಿ ದೇಸಾಯಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ಗೂ ಭೇಟಿ ನೀಡಿ ಸೋಂಕಿತರ ಆರೋಗ್ಯ ವಿಚಾರಿಸಿ ಆತ್ಮಸ್ಥೈರ್ಯ ತುಂಬಿದರು.

ಪೊಲೀಸ್ ವಸತಿಗೃಹ ಸೀಲ್‌ಡೌನ್: ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿ ಮಾರಸಂದ್ರದ 54 ವರ್ಷದ ವ್ಯಕ್ತಿ, 60 ವರ್ಷದ ವೃದ್ಧೆ, ಪಟ್ಟಣ ಸಮೀಪದ ಗೋಣಿ ತುಮಕೂರಿನ 45 ವರ್ಷದ ಮಹಿಳೆ, ಆಲ್ಬೂರಿನ 32 ವರ್ಷದ ಪುರುಷ ಹಾಗೂ ಪಟ್ಟಣದ ಠಾಣೆ ಪೇದೆಯ 14 ವರ್ಷದ ಮಗನಿಗೆ ಸೋಂಕು ತಗುಲಿದ್ದು ಪೊಲೀಸ್ ವಸತಿ ಗೃಹವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.

ಕೋವಿಡ್ ಆಸ್ಪತ್ರೆಗೆ ಮೇಯರ್ ಭೇಟಿ: ಕರೊನಾ ಸೋಂಕಿತರಿಗೆ ಸೂಕ್ತ ವ್ಯವಸ್ಥೆ, ಮೂಲಸೌಕರ್ಯವಿಲ್ಲವೆಂಬ ದೂರುಗಳ ಹಿನ್ನೆಲೆಯಲ್ಲಿ ತುಮಕೂರು ಪಾಲಿಕೆ ಮೇಯರ್ ಫರಿದಾಬೇಗಂ ಪತಿ ಹಫೀಜ್ ಜತೆ ಗುರುವಾರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವಾರ್ಡ್‌ಗಳಿಗೆ ಪಿಪಿಇ ಕಿಟ್, ಮಾಸ್ಕ್, ಕೈಗವಸು ಧರಿಸಿ ಮುಂಜಾಗ್ರತೆಯೊಂದಿಗೆ ತೆರಳಿ ಖುದ್ದು ಸೋಂಕಿತರಿಂದಲೇ ಅಲ್ಲಿನ ವ್ಯವಸ್ಥೆ, ಆರೈಕೆ, ಆಹಾರ, ಕುಡಿಯುವ ನೀರು, ಶುಚಿತ್ವದ ಮಾಹಿತಿ ಪಡೆದರು. ಕರೊನಾ ವಿರುದ್ಧ ಎಲ್ಲರೂ ಹೋರಾಡೋಣ, ನಿಮ್ಮ ಜತೆ ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ಇರುತ್ತದೆ ಎಂದು ರೋಗಿಗಳಲ್ಲಿ ಧೈರ್ಯ ತುಂಬಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಬಿ.ನಾಗೇಂದ್ರಪ್ಪ , ಡಾ. ವೀಣಾ ಮಾಹಿತಿ ನೀಡಿದರು.