ಜಿಲ್ಲೆ

ಶೇ.೬೭.೫೪ ಜಿದ್ದಾಜಿದ್ದಿ ವೋಟಿಂಗ್

ವಿದ್ಯಾ ಶೆಟ್ಟನಗೌಡ್ರ

ಹುಕ್ಕೇರಿ: ತೀವ್ರ ಹಣಾಹಣಿಗೆ ಸಾಕ್ಷಿಯಾಗಿದ್ದ ಹುಕ್ಕೇರಿ ವಿದ್ಯುತ್ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಮತದಾನ ಸಣ್ಣ-ಪುಟ್ಟ ಗಲಾಟೆ, ಗದ್ದಲ ನಡುವೆ ಎಸ್‌ಕೆ ಹೈಸ್ಕೂಲ್ ಹಾಗೂ ಬಾಪೂಜಿ ಶಾಲೆ ಆವರಣದಲ್ಲಿ ಭಾನುವಾರ ಶೇ.೬೭.೫೪ ಮತದಾನವಾಗಿದೆ.

೪೧,೦೫೦ ಮತದಾರರು ಮತದಾನ ಮಾಡಿದರು. ೧೫ ನಿರ್ದೇಶಕರ ಸ್ಥಾನಕ್ಕೆ ಒಟ್ಟು ೩೨ ಅಭ್ಯರ್ಥಿಗಳು ಸ್ಫರ್ಧಿಸಿದ್ದರು. ಸಂಘದ ೯೭,೮೪೧ ಸದಸ್ಯರ ಪೈಕಿ ೬೦,೦೪೬ ಜನ ಮತದಾನಕ್ಕೆ ಅರ್ಹರಾಗಿದ್ದರು. ೧೨೨ ಮತಗಟ್ಟೆ ಕೇಂದ್ರ ಸ್ಥಾಪಿಸಲಾಗಿತ್ತು. ಬೆಳಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಮತದಾನ ನಡೆಯಿತು. ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಮಾಜಿ ಸಂಸದ ರಮೇಶ ಕತ್ತಿ ಹಾಗೂ ಮಾಜಿ ಸಚಿವ ಎ.ಬಿ.ಪಾಟೀಲ ನೇತೃತ್ವದಲ್ಲಿ ಸ್ವಾಭಿಮಾನಿ ಪೇನಲ್ ಹಾಗೂ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದ ದಿ.ಅಪ್ಪಣಗೌಡ ಪಾಟೀಲ ಪೇನಲ್ ಪರ ಬೆಂಬಲಿಗರ ನಡುವೆ ಚಿಹ್ನೆಯ ಚೀಟಿ ನೀಡುವ ಸಂಬಂಧಿತ ಸಣ್ಣಪುಟ್ಟ ಮಾತಿನ ಚಕಮಕಿ ನಡೆದವು. ಎರಡೂ ಬಣದ ಕಾರ್ಯಕರ್ತರು ತಮ್ಮತಮ್ಮ ನಾಯಕರ ಹೆಸರಿನಿಂದ ಜಯಘೋಷ ಕೂಗಿದರು. ಬಳಿಕ ಪೊಲೀಸರು ಬೆಂಬಲಿಗರನ್ನು ಚದುರಿಸಿ ವಾತಾವರಣ ತಿಳಿಗೊಳಿಸಿದರು. ಇದನ್ನು ಹೊರತು ಪಡೆಸಿದರೆ ಶಾಂತಿಯುತವಾಗಿ ಮತದಾನ ನಡೆಯಿತು. ಮಾಜಿ ಸಂಸದ ರಮೇಶ ಕತ್ತಿ ಮತ್ತು ಶಾಸಕ ನಿಖಿಲ ಕತ್ತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಮತದಾನ ಶಾಂತಿಯುತವಾಗಿ ನಡೆಯಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಕತ್ತಿ ಮತ್ತು ಜಾರಕಿಹೊಳಿ ಬೆಂಬಲಿಗರ ಮಧ್ಯೆ ಗಲಾಟೆ, ವಾಗ್ವಾದ, ಚೀರಾಟ ಸಾಮಾನ್ಯವಾಗಿತ್ತು. ಒಬ್ಬ ಮತದಾರ ೧೫ ಮತ ನೀಡಲು ೬ ಮತಪತ್ರಗಳನ್ನು ಬಳಸಬೇಕಾಗಿದ್ದರಿಂದ ವಿಳಂಬ ಆಗುತ್ತಿತ್ತು.

ಶಾಸಕ ನಿಖಿಲ ಕತ್ತಿ ಮಾತನಾಡಿ, ಮತದಾನ ಸಮಯ ಹೆಚ್ಚಿಸಲು ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಚುನಾವಣೆಯಲ್ಲಿ ತಾಲೂಕಿನ ಮತದಾರರು ನಮ್ಮನ್ನು ಬೆಂಬಲಿಸುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಚುನಾವಣೆ ಪ್ರಕ್ರಿಯೆ ವೀಕ್ಷಿಸಿ ಮಾತನಾಡಿ, ಮತ ಎಣಿಕೆ ಬಳಿಕ ಮತದಾರ ಯಾರ ಕೈಹಿಡಿಯುತ್ತಾನೆ ಎಂಬುದು ಗೊತ್ತಾಗುತ್ತದೆ. ನಮ್ಮ ಬಣ ಬಹುಮತದಿಂದ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದರು.

ಎರಡು ಕಿಮೀ ವಾಹನ ದಟ್ಟಣೆ: ಮತದಾನ ಹಿನ್ನೆಲೆಯಲ್ಲಿ ಗೋಕಾಕ-ಸಂಕೇಶ್ವರ ರಸ್ತೆಯಲ್ಲಿ ನೇರ್ಲಿ ಗ್ರಾಮದವರೆಗೂ ಎರಡು ಕಿಮೀ ಟ್ರಾಫಿಕ್ ಜಾಮ್ ಉಂಟಾಯಿತು. ಪರಿಣಾಮ ಹಿರಿಯ ನಾಗರಿಕರು ಮತದಾನ ಕೇಂದ್ರಕ್ಕೆ ಆಗಮಿಸಲು ಹರಸಾಹಸಪಟ್ಟರು. ಕೆಲ ಮತದಾರರು ಮತದಾನ ಮಾಡದೆ ಮನೆಗೆ ತೆರಳಿದರು.