ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕರೊನಾ ಪಾಸಿಟಿವಿಟಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ರಾಜ್ಯಾದ್ಯಂತ 66,361 ಅಂಗನವಾಡಿ ಕೇಂದ್ರಗಳನ್ನು ಪುನರಾರಂಭಿಸಲಾಗಿದ್ದು, ಬೆಳಗ್ಗೆ 10 ರಿಂದ 12ಗಂಟೆವರೆಗೆ ಕಾರ್ಯನಿರ್ವಹಿಸಲಿವೆ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವ ಹಾಲಪ್ಪ ಬಸಪ್ಪ ಆಚಾರ್ ಹೇಳಿದರು.
ತಾಲೂಕಿನ ಆದಿನಾರಾಯಣಹೊಸಹಳ್ಳಿಯ ಅಂಗನವಾಡಿ ಪುನರಾರಂಭಕ್ಕೆ ಸೋಮವಾರ ಚಾಲನೆ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಉದ್ಘಾಟನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಂಗನವಾಡಿ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿದ್ದು, ಪಾಲಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು. ಪಾಲಕರ ಒಪ್ಪಿಗೆ ಪತ್ರ ಪಡೆಯುವಂತೆ ಸೂಚಿಸಿದ್ದೇವೆ. ಮಕ್ಕಳ ಆರೋಗ್ಯ ಏರುಪೇರಾದಲ್ಲಿ ಮೊದಲು ಪಾಲಕರ ಗಮನಕ್ಕೆ ತರಬೇಕು. ಚಿಕಿತ್ಸೆ ನೀಡುವಲ್ಲಿ ಜಿಲ್ಲಾಡಳಿತಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದರು.
ಪೌಷ್ಟಿಕ ಆಹಾರ ಮನೆಗೆ: ಅಂಗನವಾಡಿಯಲ್ಲಿ ಸಿದ್ಧಪಡಿಸಿರುವ ಆಹಾರ ನೀಡಲು ತಡೆನೀಡಿದ್ದು, ನೇರವಾಗಿ ಮಕ್ಕಳ ಮನೆಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಕರೊನಾ ಸಂದರ್ಭದಿಂದಲೂ ಈ ಕಾರ್ಯ ಸುಗಮವಾಗಿ ನಡೆಯುತ್ತಿದೆ. ಕ್ಷೀರಭಾಗ್ಯ, ಸೃಷ್ಟಿ ಯೋಜನೆ, ಮಾತೃಪೂರ್ಣ ಯೋಜನೆಗಳ ಫಲಾನುಭವಿಗಳಿಗೂ ನೇರವಾಗಿ ಮನೆಗೆ ಪೌಷ್ಟಿಕ ಆಹಾರ ತಲುಪುತ್ತಿದೆ. ಇದರೊಂದಿಗೆ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪುನರ್ವಸತಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಮೂರು ತಿಂಗಳಿಗೊಮ್ಮಆರೋಗ್ಯ ತಪಾಸಣೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲಾಡಳಿತ ತೀವ್ರ ನಿಗಾವಹಿಸಲಿ: ಜಿಲ್ಲೆಯ ಅಂಗನವಾಡಿ ಕೇಂದ್ರದ ಪುನರಾರಂಭಕ್ಕೆ ಸಚಿವರು ಚಾಲನೆ ನೀಡಿರುವುದು ಸಂತಸ ತಂದಿದೆ. ಜಿಲ್ಲೆಯಲ್ಲಿ 1230 ಅಂಗನವಾಡಿಗಳೂ ಆರಂಭವಾಗಿವೆ. ಎಲ್ಲ ಅಂಗನವಾಡಿ ಕೇಂದ್ರಗಳು ಮಾರ್ಗಸೂಚಿ ಪಾಲಿಸಬೇಕು. ಮಕ್ಕಳ ಆರೋಗ್ಯ ತಪಾಸಣೆ, ಆರೋಗ್ಯ ಏರುಪೇರಾದಾಗ ಸೂಕ್ತ ಚಿಕಿತ್ಸೆ ನೀಡಿ ಕೂಡಲೇ ಪಾಲಕರಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ತಾಲೂಕು, ಜಿಲ್ಲಾ ಆಡಳಿತ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಸೂಚಿಸಿದರು.
ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಅರುಳ್‌ಕುಮಾರ್, ತಹಸೀಲ್ದಾರ್ ಟಿ.ಎಸ್.ಶಿವರಾಜ್, ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮೀನಾರಾಯಣ್, ಬಿಜೆಪಿ ನಗರ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ತಾಲೂಕು ಅಧ್ಯಕ್ಷ ನಾಗರಾಜು ಇದ್ದರು.