ಶಿವಮೊಗ್ಗ: ಬರೊಬ್ಬರಿ 10 ತಿಂಗಳ ಬಳಿಕ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಶುಕ್ರವಾರ ಆರಂಭವಾಗಿದವು. ಮೊದಲ ಹಂತದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾದರೂ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಸ್ಪಂದನೆ ಸಿಕ್ಕಿಲ್ಲ. ಶೇ.65 ಪ್ರಮಾಣದಲ್ಲಿ ಎಸ್ಎಸ್ಎಲ್ಸಿ ಮಕ್ಕಳು ತರಗತಿಗೆ ಹಾಜರಾದರೆ, ಶೇ.41 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ್ದರು.
ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 23,683. ಈ ಪೈಕಿ ಶಾಲೆಗೆ ಬಂದವರು 15,393 ವಿದ್ಯಾರ್ಥಿಗಳು. ದ್ವಿತೀಯ ಪಿಯುಸಿಯ 16,863 ವಿದ್ಯಾರ್ಥಿಗಳಲ್ಲಿ 6,960 ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ್ದರು. ಸರ್ಕಾರಿ ಕಾಲೇಜುಗಳ 3.150, ಅನುದಾನಿತ ಕಾಲೇಜುಗಳ 1,164 ಹಾಗೂ ಅನುದಾನರಹಿತ ಕಾಲೇಜಿನ 2,646 ವಿದ್ಯಾರ್ಥಿಗಳು ಮೊದಲ ದಿನ ಆಗಮಿಸಿದ್ದರು.
ಹೊಸ ವರ್ಷದ ಮೊದಲ ದಿನ ಮಕ್ಕಳು ಅತ್ಯಂತ ಉತ್ಸಾಹದಿಂದ ಶಾಲೆ, ಕಾಲೇಜಿನತ್ತ ಮುಖ ಮಾಡಿದ್ದು ವಿಶೇಷವಾಗಿತ್ತು. ಎಲ್ಲ ಶಾಲಾ, ಕಾಲೇಜು ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಕರೊನಾ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿತ್ತು. ಪ್ರತಿ ಡೆಸ್ಕ್ನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಲಾಗಿತ್ತು. ಪ್ರತಿ ಕೊಠಡಿಯಲ್ಲಿ ಗರಿಷ್ಠ 20 ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಕರೊನಾ ಲಕ್ಷಣ ಕಂಡುಬಂದಲ್ಲಿ ತಕ್ಷಣ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲು ಎಲ್ಲ ಕಡೆಯೂ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯ ಶಿಕ್ಷಕರು ಹಾಗೂ ಪ್ರಾಚಾರ್ಯರು ಸಮೀಪದ ಆರೋಗ್ಯಕೇಂದ್ರ ದೊಂದಿಗೆ ಸಂಪರ್ಕದಲ್ಲಿದ್ದು, ವಿದ್ಯಾರ್ಥಿ ಆರೋಗ್ಯದಲ್ಲಿ ತೊಂದರೆ ಕಂಡುಬಂದಲ್ಲಿ ತಕ್ಷಣ ಆರೋಗ್ಯ ಕೇಂದ್ರವನ್ನು ಸಂರ್ಪಸಲು ತಿಳಿಸಲಾಗಿತ್ತು.
ಶಾಲೆಗಳಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮೊಂದಿಗೆ ಪಾಲಕರ ಒಪ್ಪಿಗೆ ಪತ್ರವನ್ನೂ ತಂದಿದ್ದರು. ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿಯನ್ನು ಕಡ್ಡಾಯವಾಗಿ ಕರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು.