ಜಿಲ್ಲೆ

ರಾಜ್ಯದಲ್ಲಿ 65 ಹೊಸ ರೈಲು ನಿಲ್ದಾಣ ನಿರ್ಮಾಣ

ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮಾಹಿತಿ

ಉಡುಪಿ-ಮಂಗಳೂರಿನಲ್ಲಿ ಹೆದ್ದಾರಿ ಅಭಿವೃದ್ಧಿ ಚುರುಕು

ವಿಜಯವಾಣಿ ಸುದ್ದಿಜಾಲ ಉಡುಪಿ

ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಸಾರಿಗೆ ಸಚಿವ ನಿತಿನ್​ ಗಡ್ಕರಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಸಹಕಾರದಲ್ಲಿ ಉಡುಪಿ-ಮಂಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈಲ್ವೆ ಹಾಗೂ ಹೆದ್ದಾರಿಯ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ರಾಜ್ಯದಲ್ಲಿ 2,650 ಕೋಟಿ ರೂ. ವೆಚ್ಚದಲ್ಲಿ 65 ಹೊಸ ರೈಲ್ವೆ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದರು.

ಉಡುಪಿಯ ಇಂದ್ರಾಳಿಯಲ್ಲಿ ಭಾನುವಾರ ರೈಲ್ವೆ ಮೇಲ್ಸೇತುವೆ ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿ, ಈಗಾಗಲೇ 16 ನಿಲ್ದಾಣ ಪೂರ್ಣಗೊಂಡಿದೆ ಎಂದು ತಿಳಿಸಿದರು.

ರೈಲ್ವೆ ಕಾಮಗಾರಿಗಳ ಮಾಹಿತಿ

ಮಂಗಳೂರಿಗೆ ಇನ್ನೊಂದು ರೈಲ್ವೆ ಲೈನ್​ ಕೊಡಲು ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದ ಸೋಮಣ್ಣ ವಿವಿಧ ಕಾಮಗಾರಿಯ ಮಾಹಿತಿ ನೀಡಿದರು. ಅಮೃತ ಭಾರತ ಯೋಜನೆಯಡಿ 22 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮಗಳೂರು ರೈಲ್ವೆ ನಿಲ್ದಾಣ ಕಾಮಗಾರಿ ನಡೆದಿದೆ. 750 ಕೋಟಿ ರೂ. ವೆಚ್ಚದಲ್ಲಿ ಅರಸಿಕೆರೆ-ತುಮಕೂರು 96 ಕಿಮೀ ಡಬಲ್​ ಲೈನ್​ ಕಾಮಗಾರಿ, 185 ಕೋಟಿ ರೂ. ವೆಚ್ಚದ ಚಿಕ್ಕಬಾಣಾವರ-ಹಾಸನ 145 ಕಿಮೀ ರೈಲು ಮಾರ್ಗದ ವಿದ್ಯುದಿಕರಣ ಕಾಮಗಾರಿ ಪೂರ್ಣ, 535 ಕೋಟಿ ರೂ. ವೆಚ್ಚದಲ್ಲಿ ಕಡೂರು-ಚಿಕ್ಕಮಗಳೂರು-ಬೇಲೂರು 65 ಕಿಮೀ ಹೊಸ ಮಾರ್ಗ ಮುಗಿಯುವ ಹಂತದಲ್ಲಿದೆ. 290 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮಗಳೂರು-ಬೇಲೂರು 23 ಕಿಮೀ ಹೊಸ ಮಾರ್ಗ ಮುಗಿಯುವ ಹಂತದಲ್ಲಿದೆ ಎಂದರು.

ರಾಜ್ಯದಲ್ಲಿ 5 ಸಾವಿರ ಕಿಮೀ ರಸ್ತೆ

ರಾಜ್ಯದಲ್ಲಿ 5 ಸಾವಿರ ಕಿಮೀ ರಸ್ತೆಗೆ ಈವರೆಗೆ 47,043 ಕೋಟಿ ರೂ. ಖರ್ಚು ಮಾಡಲಾಗಿದೆ. 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕಾಮಗಾರಿ ನಡೆದಿದೆ. 1,417 ಕೋಟಿ. ರೂ. ಮೊತ್ತದಲ್ಲಿ 63.61 ಕಿಮೀ ಅಡ್ಡಹೊಳೆ-ಬಂಟ್ವಾಳ ನಾಲ್ಕು ಪಥದ ರಸ್ತೆ ಕಾಮಗಾರಿ ಮುಗಿದಿದೆ. 1,137 ಕೋಟಿ ರೂ. ವೆಚ್ಚದಲ್ಲಿ 45 ಕಿಮೀ. ಕಾರ್ಕಳ-ಮಂಗಳೂರು ಚತುಷ್ಪಥ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. 365 ಕೋಟಿ ರೂ. ವೆಚ್ಚದಲ್ಲಿ ಹೆಬ್ರಿಯಿಂದ ಮಲ್ಪೆ ವರೆಗೆ 26 ಕಿಮೀ ಚತುಷ್ಪಥ ರಸ್ತೆಯ ಶೇ.80 ಕಾಮಗಾರಿ ಮುಗಿದಿದೆ ಎಂದರು.

139 ಕೋಟಿ ರೂ. ಮೊತ್ತದಲ್ಲಿ 13 ಕಿಮೀ ಮಾಲಘಾಟ್​ನಿಂದ ಕಾರ್ಕಳದವರೆಗೆ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದೆ. 395 ಕೋಟಿ ರೂ. ವೆಚ್ಚದಲ್ಲಿ ಬೈಂದೂರು-ಕೊಲ್ಲೂರು 30 ಕಿಮೀ ದ್ವಿಪಥ ರಸ್ತೆ ಕಾಮಗಾರಿ ಆರಂಭಗೊಂಡಿದೆ. 718 ಕೋಟಿ ರೂ. ವೆಚ್ಚದಲ್ಲಿ 35 ಕಿಮೀ. ಗುಂಜನಕಟ್ಟೆಯಿಂದ ಚಾರ್ಮಾಡಿವರೆಗೆ ದ್ವಿಪಥ ರಸ್ತೆ ಮುಗಿಯುವ ಹಂತದಲ್ಲಿದೆ. 343 ಕೋಟಿ ರೂ. ಮೊತ್ತದಲ್ಲಿ 11.2 ಕಿಮೀ. ಚಾರ್ಮಾಡಿಘಾಟ್​ನಿಂದ ಮೂಡಿಗೆರೆ ವರೆಗೆ ದ್ವಿಪಥ ರಸ್ತೆ ಮುಗಿಯುವ ಹಂತದಲ್ಲಿದೆ ಎಂದರು.

613 ಕೋಟಿ ರೂ. ವೆಚ್ಚದಲ್ಲಿ 30 ಕಿಮೀ ಉಜಿರೆ-ಧರ್ಮಸ್ಥಳದ ಪೆರಿಯಾವರೆಗೆ ದ್ವಿಪಥ ರಸ್ತೆ ಆರಂಭಗೊಳ್ಳಲಿದೆ. 176 ಕೋಟಿ ರೂ. ವೆಚ್ಚದಲ್ಲಿ ಬಿ.ಸಿ. ರೋಡ್​ನಿಂದ ಕೊಟ್ಟಿಗೆಯಾರದವರೆಗೆ 20 ಕಿಮೀ ಪೂರ್ಣಗೊಳ್ಳುತ್ತಿದೆ. 360 ಕೋಟಿ ರೂ. ವೆಚ್ಚದ 58.97 ಕಿಮೀ ಶಿರಸಿ-ಕುಮಟಾ ದ್ವಿಪಥ ರಸ್ತೆ ಕಾಮಗಾರಿ ನಡೆದಿದೆ. ಮಂಗಳೂರು ನಗರಕ್ಕೆ ಬೈಪಾಸ್​ ನಿರ್ಮಾಣಕ್ಕೆ ಡಿಪಿಆರ್​ ಮಾಡಲಾಗುತ್ತಿದೆ ಎಂದು ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಚಿವ ಸೋಮಣ್ಣ ಸಮಗ್ರ ಮಾಹಿತಿ ನೀಡಿದರು.