ಜಿಲ್ಲೆ

ನೈಋತ್ಯ ರೈಲ್ವೆಗೆ 6,493.87 ಕೋಟಿ ರೂ. ಅನುದಾನ

ಹುಬ್ಬಳ್ಳಿ : ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ನೈಋತ್ಯ ರೈಲ್ವೆಗೆ 6,493.87 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.

ಕೇಂದ್ರದಿಂದ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಮಂಜೂರು ಆಗುವ ಸರಾಸರಿ ಅನುದಾನದಲ್ಲಿ ಏರಿಕೆಯಾಗಿದೆ. ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ರೈಲು ನಿಲ್ದಾಣಗಳ ಆಧುನೀಕರಣ, ಮೂಲ ಸೌಕರ್ಯಗಳ ಅಭಿವೃದ್ಧಿ, ಪ್ರಯಾಣಿಕರ ಸುರಕ್ಷತೆ ಹಾಗೂ ಸೌಕರ್ಯ ಸುಧಾರಣೆಗೆ ನೈಋತ್ಯ ರೈಲ್ವೆ ಆದ್ಯತೆ ನೀಡುತ್ತ ಬಂದಿದೆ.

1,448.89 ಕೋಟಿ ರೂ.ಗಳನ್ನು ಹೊಸ ಮಾರ್ಗ ನಿರ್ವಣಕ್ಕೆ, 1,241 ಕೋಟಿ ರೂ.ಗಳನ್ನು ಜೋಡಿ ಮಾರ್ಗ ನಿರ್ವಣಕ್ಕೆ, 961.22 ಕೋಟಿ ರೂ.ಗಳನ್ನು ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಯೋಜಿಸಲಾಗಿದೆ.

ಹೊಸ ಮಾರ್ಗದ ಯೋಜನೆಗಳು : ಗದಗ-ವಾಡಿ (200 ಕೋಟಿ ರೂ.), ತುಮಕೂರು-ದಾವಣಗೆರೆ (ಚಿತ್ರದುರ್ಗ ಮೂಲಕ) (150 ಕೋಟಿ), ತುಮಕೂರು - ರಾಯದುರ್ಗ (ಕಲ್ಯಾಣದುರ್ಗ ಮೂಲಕ) (250 ಕೋಟಿ), ಬಾಗಲಕೋಟ-ಕುಡಚಿ (150 ಕೋಟಿ), ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರ (150 ಕೋಟಿ), ಬೆಳಗಾವಿ -ಧಾರವಾಡ (ಕಿತ್ತೂರ ಮೂಲಕ) (20 ಕೋಟಿ), ಮರಿಕುಪ್ಪಮ-ಕುಪ್ಪಮ (60 ಕೋಟಿ), ಕಡೂರ-ಚಿಕ್ಕಮಗಳೂರು-ಹಾಸನ (70 ಕೋಟಿ), ಮಾಲಗುರ-ಪಾಳಸಮುದ್ರ (21 ಕೋಟಿ), ಹಾಸನ - ಬೆಂಗಳೂರು (ಶ್ರವಣಬೆಳಗೂಳ ಮೂಲಕ) (20 ಕೋಟಿ), ಹುಬ್ಬಳ್ಳಿ-ಅಂಕೋಲಾ (20 ಕೋಟಿ), ಮುನಿರಾಬಾದ-ಮಹಬೂಬನಗರ (100 ಕೋಟಿ), ಗದಗ-ಯಾಲವಿಗಿ (150 ಕೋಟಿ).

ಜೋಡಿ ಮಾರ್ಗ ನಿರ್ವಣದ ಯೋಜನೆಗಳು :

ಗದಗ-ಹೊಟಗಿ (170 ಕೋಟಿ), ಪೆಣಕುಂಡಾ-ಧರ್ವವರಮ್ (100 ಕೋಟಿ), ಬೈಯಪ್ಪನಹಳ್ಳಿ -ಹೊಸೂರ (200 ಕೋಟಿ), ಯಶವಂತಪುರ-ಚನ್ನಸಂದ್ರಾ (100 ಕೋಟಿ), ಹುಬ್ಬಳ್ಳಿ - ಚಿಕ್ಕಜಾಜೂರ (25 ಕೋಟಿ), ಬೆಂಗಳೂರು ಕಂಟೈನ್ -ವೈಟ್​ಫಿಲ್ಡ್ ಕ್ವಾಡ್ರಪ್ಲಿಂಗ್ (200 ಕೋಟಿ), ಹೊಸಪೇಟೆ-ತಿನೈಘಾಟ್-ವಾಸ್ಕೊ (400 ಕೋಟಿ), ಯಲಹಂಕ-ಪಣಕುಂಡಾ (20 ಕೋಟಿ), ಅರಸಿಕೆರೆ-ತುಮಕೂರು (20 ಕೋಟಿ).

ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆಗಳಿಗಾಗಿ 349.40 ಕೋಟಿ, ಸಂಚಾರ ಸೌಲಭ್ಯ ಕಾಮಗಾರಿಗೆ 145.84 ಕೋಟಿ ರೂ.ಗಳನ್ನು ಮೀಸಲಿರಸಲಾಗಿದೆ.

ಪ್ರಯಾಣಿಕರ ಸುರಕ್ಷತೆ, ವೇಗದ ಮತ್ತು ಸುರಕ್ಷಿತ ಸರಕು ಸಾಗಣೆ, ಪ್ರಯಾಣಿಕರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸಲು ಯೋಜನೆಗಳನ್ನು ಮುಂದುವರೆಸಲಾಗುವುದು ಎಂದು ನೈಋತ್ಯ ರೈಲ್ವೆ ವಲಯದ ಕಚೇರಿ ಪ್ರಕಟಣೆ ತಿಳಿಸಿದೆ.