ಕಾರವಾರ: ಕಳೆದ ಮಾರ್ಚ್ನಿಂದ ಜಿಲ್ಲೆಯನ್ನು ಬೆಂಬಿಡದೇ ಕಾಡಿದ ಕೋವಿಡ್ ತಡೆಗೆ ಕವಚ ಬಂದಿದೆ. ಜಿಲ್ಲೆಯ 11 ಕೇಂದ್ರಗಳಲ್ಲಿ 645 ಜನರಿಗೆ ಮೊದಲ ದಿನ ಕೋವಿಶೀಲ್ಡ್ ಲಸಿಕೆ ನೀಡಲಾಯಿತು.
ಮೊದಲೇ ನಿಗದಿಯಾದಂತೆ ಆರೋಗ್ಯ ಸಿಬ್ಬಂದಿಯ ಹೆಸರನ್ನು ಆಪ್ನಲ್ಲಿ ನೋಂದಣಿ ಮಾಡಿ, ಪ್ರತಿಯೊಬ್ಬರಿಗೂ 0.5 ಎಂಎಲ್ ಲಸಿಕೆಯನ್ನು ನೀಡಲಾಯಿತು. ಮೊದಲ ದಿನ 807 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಸಾಯಂಕಾಲ 5 ಗಂಟೆಯವರೆಗೆ 645 ಜನರಿಗೆ ನೀಡಲು ಸಾಧ್ಯವಾಯಿತು.
31 ಜನ ತಿರಸ್ಕಾರ: ಜಿಲ್ಲೆಯ 11 ಕೇಂದ್ರಗಳಲ್ಲಿ ಡಿ ಗ್ರೂಪ್ ಸಿಬ್ಬಂದಿ, ನರ್ಸ್, ಲ್ಯಾಬ್ ಟೆಕ್ನಿಷಿಯನ್, ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿಯನ್ನು ಲಸಿಕೆ ಪಡೆಯಲು ಗುರುತಿಸಲಾಗಿತ್ತು. ಆದರೆ, ಮೊದಲ ದಿನ 31 ಜನ ಭಯ ಹಾಗೂ ಇನ್ನಿತರ ಕೆಲ ಕಾರಣಗಳಿಂದ ಕೋವಿಡ್ ವ್ಯಾಕ್ಸಿನ್ ಪಡೆಯಲು ವಿವಿಧ ಕಾರಣ ನೀಡಿ ನಿರಾಕರಣೆ ಮಾಡಿದ್ದಾರೆ. ಮೊದಲ ಹಂತದಲ್ಲಿ ಲಸಿಕೆ ಪಡೆದವರು ಇನ್ನು 28 ದಿನಗಳ ನಂತರ ಕೋವಿಡ್ ಲಸಿಕೆ ಪಡೆಯಲು ಮತ್ತೆ ಕೇಂದ್ರಗಳಿಗೆ ಬರಬೇಕಿದೆ. ಈ ಬಗ್ಗೆ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಸಂದೇಶ ಬರಲಿದೆ. ಹೊನ್ನಾವರ ಲಸಿಕಾ ಕೇಂದ್ರದಲ್ಲಿ ಮಾಹಿತಿ ದಾಖಲೀಕರಣಕ್ಕೆ ಸರ್ವರ್ ಸಮಸ್ಯೆ ಉಂಟಾಯಿತು. ಇದರಿಂದ ವಿವರಗಳನ್ನು ಮ್ಯಾನುವಲಿ ನೋಂದಣಿ ಮಾಡಿಕೊಂಡು ಲಸಿಕೆ ಪಡೆದವರನ್ನು ಕಳಿಸಿಕೊಡಲಾಯಿತು.
ಕಾರವಾರದ ಕ್ರಿಮ್್ಸ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ನೀಡಿಕೆಗೆ ತಯಾರಿಯನ್ನು ಶಾಸಕಿ ರೂಪಾಲಿ ನಾಯ್ಕ ವೀಕ್ಷಿಸಿದರು. ನಂತರ ಪ್ರಧಾನಿಯವರ ಕಾರ್ಯಕ್ರಮ ವೀಕ್ಷಿಸಿದರು. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ., ಜಿಪಂ ಸಿಇಒ ಪ್ರಿಯಾಂಗಾ ಎಂ., ಎಸ್ಪಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಮೆಡಿಕಲ್ ಕಾಲೇಜ್ನ ನಿರ್ದೇಶಕ ಡಾ.ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್, ಡಿಎಚ್ಒ ಡಾ.ಶರದ್ ನಾಯಕ ಇದ್ದರು.
ಬಾಲಚಂದ್ರ ಶಿರೋಡ್ಕರ್ ಮೊದಲಿಗ: ಸರ್ಕಾರಿ ಮೆಡಿಕಲ್ ಕಾಲೇಜ್ನ ‘ಡಿ’ ಗ್ರೂಪ್ ನೌಕರ 43 ವರ್ಷದ ಬಾಲಚಂದ್ರ ಶಿರೋಡ್ಕರ್ ಅವರು ಕೋವಿಡ್-19ರ ಪ್ರಥಮ ಲಸಿಕೆಯನ್ನು ಕಾರವಾರದಲ್ಲಿ ಪಡೆದರು. ಎಕ್ಸರೇ ಟೆಕ್ನಿಷಿಯನ್ ದಿವ್ಯಾ ಗುನಗಿ,ಛಾಯಾ ದುರ್ಗೆಕರ್ ಅವರು ಕ್ರಮವಾಗಿ ಎರಡು, ಮೂರನೆಯವರಾಗಿ ಲಸಿಕೆ ಪಡೆದರು.
ಲಸಿಕೆಯಿಂದ ವಾಕರಿಗೆ : ಹಳಿಯಾಳದಲ್ಲಿ ಲಸಿಕೆ ಪಡೆದ ಮಹಿಳಾ ನೌಕರರೊಬ್ಬರಿಗೆ 40 ನಿಮಿಷದ ನಂತರ ವಾಕರಿಕೆಯ ಅನುಭವವಾಯಿತು. ನಂತರ ಅವರು ಚೇತರಿಸಿಕೊಂಡಿದ್ದು, ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಡಿಸಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.
ಕರೊನಾಕ್ಕೆ ಔಷಧ ಇಲ್ಲ ಎಂಬ ಭಯ ಇತ್ತು. ತುಂಬ ಕಷ್ಟ ಹಾಗೂ ಆತಂಕದಿಂದ ಕೋವಿಡ್ ಕರ್ತವ್ಯ ನಿರ್ವಹಿಸಿದ್ದೆವು. ಆದರೆ, ಈಗ ಕೋವಿಡ್ ಬಾರದಂತೆ ಲಸಿಕೆ ಬಂದಿದ್ದು, ಅದನ್ನು ನಾವು ಮೊದಲ ದಿನವೇ ಪಡೆಯುತ್ತಿರುವುದಕ್ಕೆ ಸಂತಸವಾಗಿದೆ. ಲಸಿಕೆಯಿಂದ ತೊಂದರೆ ಉಂಟಾಗಿಲ್ಲ. ಜನ ಆತಂಕವಿಲ್ಲದೆ ನಿಮ್ಮ ಪಾಳಿ ಬಂದಾಗ ಲಸಿಕೆ ಪಡೆಯಿರಿ. | ಲಕ್ಷ್ಮೀ ಕೋಣೆಸರ ಇಂಚಾರ್ಜ್ ಮ್ರಾ್ಯ್ರ್ ಸರ್ಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆ ಕಾರವಾರ
ಜಿಲ್ಲೆಯಲ್ಲಿ ಮೊದಲ ದಿನ ಲಸಿಕೆ ನೀಡುವ ಕಾರ್ಯ ಸುಸೂತ್ರವಾಗಿ ನಡೆದಿದೆ. ವ್ಯಾಕ್ಸಿನ್ ತೆಗೆದುಕೊಂಡವರಿಗೆ ಹಾಗೂ ಲಸಿಕೆ ವಿತರಣೆ ಅಭಿಯಾನದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. | ಡಾ. ಹರೀಶ್ಕುಮಾರ್ ಕೆ. ಜಿಲ್ಲಾಧಿಕಾರಿ