ಸಾಂದರ್ಭಿಕ ಚಿತ್ರ 
ಜಿಲ್ಲೆ

ನಕಲಿ ಟ್ರೇಡಿಂಗ್ ಆ್ಯಪ್‌ನಲ್ಲಿ ಹೂಡಿಕೆ 6.42 ಲಕ್ಷ ರೂ. ವಂಚನೆ

ಮಂಗಳೂರು: ನಕಲಿ ಟ್ರೇಡಿಂಗ್ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿ ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿ ಯುವತಿ 6.42 ಲಕ್ಷ ರೂ. ಕಳೆದು ಕೊಂಡಿರುವ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರ ಯುವತಿ ಮಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಡೆವಲಪರ್ ಆಗಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಪರಿಚಯದವರೊಬ್ಬರು ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ಬಿಜಿ ಆ್ಯಂಡ್ ಗೋಲ್ಡ್ ಎಂಬ ಆನ್ ಲೈನ್ ನಲ್ಲಿ ಕ್ರಿಪ್ಟೋ ಟ್ರೇಡಿಂಗ್ ನ ಬಗ್ಗೆ ವಿವರಿಸಿ, ಅದರಲ್ಲಿ ಹಣ ಹೂಡಿಕೆ ಮಾಡಿದರೆ 100 ದಿನದಲ್ಲಿ ದುಪ್ಪಟ್ಟು ಆಗುವುದಾಗಿ ತಿಳಿಸಿದ್ದಾರೆ.

ಅದರಂತೆ ಯುವತಿ ಅವರು ಕಳುಹಿಸಿದ ಲಿಂಕ್ ಮೂಲಕ ಆ್ಯಪ್ ಡೌನ್ ಮಾಡಿ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಅನಂತರ ಟ್ರೆಡಿಂಗ್ ಸಿಗ್ನಲ್ ಗಳನ್ನು ಸ್ವೀಕರಿಸಿಕೊಂಡು ಆನ್ ಲೈನ್ ಟ್ರೇಡ್ ಮಾಡಿದ್ದಾರೆ. ಆಗ ವ್ಯಾಲೆಟ್ ನಲ್ಲಿ ಹಣ ಜಮಾವಣೆ ಆದ ಬಗ್ಗೆ ಬ್ಯಾಲೆನ್ಸ್ ತೋರಿದೆ. ಬಳಿಕ ಹಣ ಹಿಂಪಡೆಯುವ ಸಲುವಾಗಿ ಹಣ ಹೂಡಿಕೆ ಮಾಡಿ, 30 ದಿನಗಳ ಅನಂತರ ದುಪ್ಪಟ್ಟು ಆಗುವುದಾಗಿ ಆ್ಯಪ್ ನಲ್ಲಿ ಸೂಚಿಸಿದಂತೆ ಹಣ ಹೂಡಿಕೆ ಮಾಡಲು ಮುಂದಾಗಿದ್ದಾರೆ.

ಅದರಂತೆ ಫೆ.28ರಿಂದ ಎ.11ರ ವರೆಗೆ ಹಂತ ಹಂತವಾಗಿ ಒಟ್ಟು 6,42,000 ರೂ.ವನ್ನು ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಅನಂತರ ಆ್ಯಪ್ ತಾತ್ಕಾಲಿಕವಾಗಿ ಬಂದ್ ಆಗಿದೆ. ಈ ಬಗ್ಗೆ ಪರಿಚಯದವರಲ್ಲಿ ವಿಚಾರಿಸಿದಾಗ ಅವರು ಕೂಡಾ ಹಣ ಹೂಡಿಕೆ ಮಾಡಿ ಮೋಸ ಹೋಗಿರುವುದಾಗಿ ತಿಳಿಸಿದ್ದಾರೆ.

ಯಾರೋ ಅಪರಿಚಿತ ವ್ಯಕ್ತಿ ಆನ್ ಲೈನ್ ಮೂಲಕ ನಕಲಿ ಟ್ರೆಡಿಂಗ್ ಆ್ಯಪ್ ನಲ್ಲಿ ಸೃಷ್ಟಿಸಿ ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ. ಆನ್ ಲೈನ್ ವಂಚನೆ ಮಾಡಿದವರ ವಿರುದ್ಧ ಸೂಕ್ತ ಕಾನುನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.