ಜಿಲ್ಲೆ

64 ಕೋಟಿ ರೂ. ಬಜೆಟ್​ ಮಂಡನೆ : ವಿವಿಧ ವಾರ್ಡ್​ ಹಾಗೂ ಸಮುದಾಯಗಳ ಅಭಿವೃದ್ಧಿಗೆ ಒತ್ತು

ಮುಳಬಾಗಿಲು: ನಗರಸಭೆಯ 2022-23ನೇ ಸಾಲಿನ ನಿರೀಕ್ಷಿತ ಆದಾಯ 64.91 ಕೋಟಿ ರೂ., ನಿರೀತ ಖರ್ಚು 64.48 ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಲಾಗಿದ್ದು, 42.30 ಲಕ್ಷ ರೂ. ಉಳಿತಾಯ ಬಜೆಟ್​ ಎಂದು ಪೌರಾಯುಕ್ತ ವಿ.ಶ್ರೀಧರ್​ ಬಜೆಟ್​ ಮಂಡನೆ ಮಾಡಿದರು.
ನಗರಸಭೆ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಬಜೆಟ್​ ಆಯವ್ಯಯ ಸಭೆಯಲ್ಲಿ ಎಸ್ಸಿ, ಎಸ್​ಟಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು, ಬಡಕುಟುಂಬದಲ್ಲಿ ಮಾರಣಾಂತಿಕ ಕಾಯಿಲೆಗೆ ತುತ್ತಾದವರಿಗೆ ವೈದ್ಯಕಿಯ ನೆರವು ಮತ್ತು ಈ ಸಮುದಾಯಗಳು ವಾಸಿಸುವ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳಿಗೆ 95 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳಿಗೆ 23 ಲಕ್ಷ ರೂ., ಅಂಗವಿಕಲ ವಿದ್ಯಾರ್ಥಿಗಳಿಗೆ 15 ಲಕ್ಷ ರೂ., ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿಮಾರ್ಣ, ಎಸ್ಸಿ, ಎಸ್​ಟಿ ಹಾಗೂ ಇನ್ನಿತರ ಹಿಂದುಳಿದ ವರ್ಗಗಳ ಜನಾಂಗದವರಿಗೆ ವಸತಿಗಾಗಿ 45 ಲಕ್ಷ ರೂ. ಸಹಾಯಧನ, ಎಸ್ಸಿ ಎಸ್ಟಿ ಜನರು ವಾಸಿಸುವ ವಾರ್ಡ್​ಗಳ ಅಭಿವೃದ್ಧಿಗಾಗಿ 5.67 ಕೋಟಿ ರೂ., ಎಸ್​ಎಫ್​ಸಿ, ಮುಕ್ತನಿಧಿ ಮತ್ತು ಇತರ ಅನುದಾನದಲ್ಲಿ ಎಲ್ಲ ವಾರ್ಡ್​ಗಳ ಮೂಲಸೌಕರ್ಯಕ್ಕಾಗಿ 14.10ಲಕ್ಷ ರೂ., 1 ರಿಂದ 31ವಾರ್ಡ್​ಗಳ ನಾಮಲಕ ಅಳವಡಿಸಲು 40 ಲಕ್ಷ ರೂ. ಮೀಸಲಿರಿಸಿದೆ.
   ಸ್ವಾಗತ ಕಮಾನು, ರಸ್ತೆ ಬದಿಯಲ್ಲಿ ಗ್ರಿಲ್​ ಅಳವಡಿಕೆಗೆ 70 ಲಕ್ಷ ರೂ.,  ಶ್ರೀರಾಮ ಮಂದಿರ ಅಭಿವೃದ್ಧಿಗೆ 60 ಲಕ್ಷ ರೂ., ನಗರಸಭೆ ಕಚೇರಿಯಲ್ಲಿ ಡೈನಿಂಗ್​ ಹಾಲ್​ ಕಾಮಗಾರಿಗೆ 20 ಲಕ್ಷ ರೂ., ಸಮುದಾಯ ಭವನಗಳ ಅಭಿವೃದ್ಧಿಗೆ 1.10 ಕೋಟಿ ರೂ., ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ 40 ಲಕ್ಷ ರೂ., ಸ್ವಾಗತ ಫಲಕ ಅಳವಡಿಸುವುದಕ್ಕೆ 40 ಲಕ್ಷ ರೂ., ಕಚೇರಿ ಕಾಂಪೌಂಡ್​ ನಿಮಾರ್ಣಕ್ಕೆ 20 ಲಕ್ಷ ರೂ., ಕುಸ್ತಿ ಮೈದಾನ ನಿಮಾರ್ಣಕ್ಕೆ 75 ಲಕ್ಷ ರೂ., ಸ್ಮಶಾನಗಳ ಅಭಿವೃದ್ಧಿಗೆ 25ಲಕ್ಷ ರೂ., ವಿದ್ಯುತ್​ ಶವಾಗಾರ ದಹನ ಯಂತ್ರ ಖರೀದಿಗೆ 50 ಲಕ್ಷ ರೂ. ಮೀಸಲಿರಿಸಲಾಗಿದೆ.
   ಗುತ್ತಿಗೆದಾರರು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಅನುದಾನ ದುರುಪಯೋಗವಾಗುತ್ತಿದೆ. ಬಹುತೇಕ ವಾರ್ಡ್​ಗಳಲ್ಲಿ ಸಮಸ್ಯೆ ಹೆಚ್ಚಿದ್ದು, ಈ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಬಹುತೇಕ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಚ್​.ನಾಗೇಶ್​ ಮಧ್ಯಪ್ರವೇಶಿಸಿ ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸದಿದ್ದರೆ ಗುತ್ತಿಗೆದಾರರ ಬಿಲ್​ ತಡೆ ಹಿಡಿಯಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
   ನಗರಸಭೆ ಉಪಾಧ್ಯಕ್ಷೆ ಭಾಗ್ಯಮ್ಮರಾಮಚಂದ್ರಯ್ಯ, ಸ್ಥಾಯಿಸಮಿತಿ ಅಧ್ಯಕ್ಷ ಜಗನ್​ ಮೋಹನ್​ರೆಡ್ಡಿ, ಸದಸ್ಯರಾದ ಎಸ್​.ವೈ.ರಾಜಶೇಖರ್​, ಜಿ.ನಾಗರಾಜ್​, ಡಿ.ಸೋಮಣ್ಣ, ಟಿ.ಎಸ್​.ಸುವರ್ಣ, ಪದ್ಮಾರಘು, ಮಲ್ಲಿಕಾರ್ಜುನ್​, ಜಬೀವುಲ್ಲಾ, ಚಾಂದ್​ಪಾಷಾ, ಗರಡಿ ಆರ್​.ಶಂಕರಪ್ಪ, ಮುನಿರಾಜು ಇತರರು ಇದ್ದರು.