ತಾಲೂಕಿನಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಗೆ ಪಟ್ಟಣದ ಕೋಡಿಕ್ಯಾಂಪ್ ಭೋವಿ ಕಾಲನಿಯ ಮುಬಾರಕ್ ಎಂಬುವವರ ಮನೆ ಗೋಡೆ ಕುಸಿದಿರುವುದು. 
ಜಿಲ್ಲೆ

ತರೀಕೆರೆಯಲ್ಲಿ 64.6 ಮಿ.ಮೀ ಮಳೆ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಗುರುವಾರದಿಂದ ಶುಕ್ರವಾರ ಬೆಳಗ್ಗೆ 8 ಗಂಟೆವರಗೆ ತಾಲೂಕಿನ ಲಕ್ಕವಳ್ಳಿಯಲ್ಲಿ 56 ಮಿ.ಮೀ, ರಂಗೇನಹಳ್ಳಿಯಲ್ಲಿ 54.4 ಮಿ.ಮೀ, ಹುಣಸಘಟ್ಟ 61 ಮಿ.ಮೀ, ಲಿಂಗದಹಳ್ಳಿ 29.8 ಮಿ.ಮೀ, ತ್ಯಾಗದಬಾಗಿ 46.3 ಮಿ.ಮೀ, ತಣಿಗೇಬೈಲು 52.2 ಮಿ.ಮೀ, ಉಡೇವಾ 28.2 ಮಿ.ಮೀ ಹಾಗೂ ತರೀಕೆರೆ ಪಟ್ಟಣದಲ್ಲಿ ಅತ್ಯಧಿಕ 64.6 ಮಿ.ಮೀ ಮಳೆ ಸುರಿದಿದೆ.
ಮಳೆಗೆ ಪಟ್ಟಣದ ಕೋಡಿಕ್ಯಾಂಪ್‌ನ ಗಂಗಮ್ಮ, ಕೋಡಿಕ್ಯಾಂಪ್ ಭೋವಿ ಕಾಲನಿ ನಿವಾಸಿ ಮುಬಾರಕ್, ನಾಯಕರ ಬೀದಿಯ ಟಿ.ಕೆ.ನಾಗರಾಜ್, ಬಸವೇಶ್ವರ ಬೀದಿಯ ಶಿವಮ್ಮ, ಗೋಪಾಲ ಗ್ರಾಮದ ಕಮಲಮ್ಮ, ಬಾವಿಕೆರೆಯ ಸೇವ್ಯಾನಾಯ್ಕ, ಲಕ್ಕೇನಹಳ್ಳಿ ಗ್ರಾಮದ ಕರಿಯಮ್ಮ ಎಂಬುವವರ ಮನೆ ಗೋಡೆ, ಬಾವಿಕೆರೆ ಗ್ರಾಮದಲ್ಲಿ ಚಿದಾನಂದ ಎಂಬುವರ ದನದ ಕೊಟ್ಟಿಗೆ ಮೇಲ್ಛಾವಣಿ ಕುಸಿದಿದೆ. ಮೇಲ್ಛಾವಣಿ ಕುಸಿದ ರಭಸಕ್ಕೆ ಕೊಟ್ಟಿಗೆಯಲ್ಲಿದ್ದ ಹಸುವಿಗೆ ತೀವ್ರ ಗಾಯವಾಗಿದೆ.
ಅಲ್ಲಲ್ಲಿ ಮರದ ಜತೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಘಟನಾ ಸ್ಥಳಕ್ಕೆ ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ತೆರವು ಕಾರ್ಯಾಚಣೆ ನಡೆಸಿದ್ದಾರೆ. ಮನೆ ಗೋಡೆ ಕುಸಿದಿರುವ ಕಡೆ ಕಂದಾಯ ನಿರೀಕ್ಷಕ ಟಿ.ಆರ್.ಶ್ರೀಧರ್, ಗ್ರಾಮ ಆಡಳಿತಾಧಿಕಾರಿ ಧನಂಜಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.