ಚಾಮರಾಜನಗರ: ತಮಿಳುನಾಡಿನಿಂದ ಕೂಲಿ ಕೆಲಸಕ್ಕೆ ಬಂದು ಲಾಕ್‌ಡೌನ್‌ನಲ್ಲಿ ಸಿಲುಕಿ ಅತಂತ್ರ ಸ್ಥಿತಿಯಲ್ಲಿದ್ದ 63 ಕೂಲಿ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳುಹಿಸಿಕೊಡಲಾಯಿತು.
ಈ ಕಾರ್ಮಿಕರು ತಮಿಳುನಾಡಿನ ಹಂದಿಯೂರು ವ್ಯಾಪ್ತಿಯ ಗ್ರಾಮಗಳಿಂದ ಚಾಮರಾಜನಗರ ತಾಲೂಕಿನ ತೋಟಗಳಿಗೆ ಅರಿಶಿಣ ಬಿತ್ತನೆ ಕಾರ್ಯಕ್ಕೆ ಬಂದಿದ್ದರು. ಅವರೆಲ್ಲರೂ 50 ದಿನಗಳಿಂದ ಸ್ವಗ್ರಾಮಗಳಿಗೆ ತೆರಳಲು ಸಾಧ್ಯವಾಗದೆ ಪುಣಜನೂರು ಚೆಕ್‌ಪೋಸ್ಟ್‌ನಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಅವರನ್ನು ತಾಲೂಕು ಆಡಳಿತ ಹರವೆ ಮುರಾರ್ಜಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇಟ್ಟಿತ್ತು. ಲಾಕ್‌ಡೌನ್ ಸಡಿಲಿಕೆ ನಂತರ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಕಾರ್ಮಿಕರು ತೆರಳಲು ಅವಕಾಶ ನೀಡಿದ ಹಿನ್ನೆಲೆ ತಮಿಳುನಾಡು ಜಿಲ್ಲಾಧಿಕಾರಿಗಳ ಅನುಮತಿ ಪಡೆದು, ಚೆಕ್‌ಪೋಸ್ಟ್ ಪಾಸ್ ಅನ್ನು ಇಲ್ಲಿನ ಜಿಲ್ಲಾಧಿಕಾರಿಗಳಿಂದ ಪಡೆದುಕೊಂಡು ಎರಡು ಖಾಸಗಿ ಬಸ್‌ನಲ್ಲಿ ಮಂಗಳವಾರ ರಾತ್ರಿ ವಾಪಸ್ ಊರಿಗೆ ಕಳುಹಿಸಲಾಯಿತು.
ಕೇಂದ್ರದಿಂದ ಇಲ್ಲ ವಿಶೇಷ ಪ್ಯಾಕೇಜ್
ಕಾರ್ಮಿಕರು ಕಳುಹಿಸುವ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು, ಕೂಲಿ ಕಾರ್ಮಿಕರ ಆರೋಗ್ಯ ವಿಚಾರಿಸಿದರು. ಯಡಪುರ ಸರ್ಕಲ್ ಬಳಿ ಎಲ್ಲರಿಗೂ ಕುಡಿಯುವ ನೀರು, ಬಿಸ್ಕೇಟ್ ನೀಡಿ ಬೀಳ್ಕೊಟ್ಟರು.
ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಲಾಕ್‌ಡೌನ್ ಮಾಡುವ ಜತೆಗೆ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕು. ಕರ್ನಾಟಕ ರಾಜ್ಯದಿಂದ 27 ಸಂಸದರು ಆಯ್ಕೆಯಾಗಿದ್ದಾರೆ. ಒಂದು ದಿನವೂ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವಂತೆ ಪ್ರಧಾನಿಗಳಲ್ಲಿ ಮನವಿ ಮಾಡಿಕೊಂಡಿಲ್ಲ. ಆದರೆ, ನಮ್ಮ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು 50 ಸಾವಿರ ಕೋಟಿ ರೂ. ನೀಡಬೇಕೆಂದು ಸಿಎಂ ಮೂಲಕ ಕೇಳಿದ್ದಾರೆ. ಎಲ್ಲ ರಾಜ್ಯದ ಜನತೆಯ ಹಿತಾಸಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಕಾಪಾಡಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಮಹೇಶ್, ಆರ್‌ಐ ರಾಜಣ್ಣ, ಶಾಸಕರ ಆಪ್ತ ಕಾರ್ಯದರ್ಶಿ ರವೀಂದ್ರ, ತಾಪಂ ಸದಸ್ಯ ಮಹದೇವಶೆಟ್ಟಿ, ಗ್ರಾಪಂ ಅಧ್ಯಕ್ಷ ಸ್ವಾಮಿ, ಸದಸ್ಯ ಮಹೇಶ, ಸ್ವಾಮಿ, ಮಂಜು ಇದ್ದರು.