ಮುರುಡೇಶ್ವರ ಜಲ ವಿದ್ಯುತ್‌ಗಾರದ ಮೂಲಕ ನೀರು ಹರಿಯುತ್ತಿರುವುದು. 
ಜಿಲ್ಲೆ

62 ಸಾವಿರ ಕ್ಯೂಸೆಕ್ ನೀರು ಕೃಷ್ಣೆಗೆ

ಕೊಡೇಕಲ್: ಮಹಾರಾಷ್ಟçದ ಕೋಯ್ನಾ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ನಾರಾಯಣಪುರ ಬಸವಸಾಗರ ಜಲಾಶಯ ಬಹುತೇಕ ಭರ್ತಿಯಾದ ಕಾರಣ 21 ಕ್ರಸ್ಟ್ ಗೇಟ್‌ಗಳ ಮೂಲಕ ಬುಧವಾರ 62 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡಲಾಯಿತು.

ಕೋಯ್ನಾ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರಿನ ಒಳ ಹರಿವು ಉಂಟಾಗಿದ್ದು, ಈ ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ನದಿಗೆ 65 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಹರಿಸುತ್ತಿರುವುದರಿಂದ ನಾರಾಯಣಪುರ ಬಸವಸಾಗರ ಜಲಾಶಯ ಕೂಡ ಬಹುತೇಕ ಭರ್ತಿಯಾಗಿದೆ. ಈ ಕಾರಣಕ್ಕಾಗಿ ಬುಧವಾರ ಬೆಳಗ್ಗೆ ಜಲಾಶಯದ ಮುಖ್ಯಕ್ರಸ್ಟ್ ಗೇಟುಗಳಿಗೆ ಪೂಜೆ ಸಲ್ಲಿಸಿ, 21 ಗೇಟುಗಳ ಮೂಲಕ 62 ಸಾವಿರ ಕ್ಯೂಸೆಕ್ ನದಿಗೆ ನೀರು ಹರಿಸಲಾಯಿತು.

ಬಸವಸಾಗರ ಜಲಾಶಯದ ಗರಿಷ್ಟ 492.252 ಮೀ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ 491.48 ಮೀ ನೀರು ಸಂಗ್ರಹವಾಗಿದೆ. 33.313 ಟಿಎಂಸಿ ನೀರು ಸಂಗ್ರಹದ ಜಲಾಶಯದಲ್ಲಿ 31.010 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನೂ ಒಳಹರಿವಿನಲ್ಲಿ ಏರಿಕೆಯಾಗುವ ಲಕ್ಷಣದಿಂದ ಜಲಾಶಯ ನೀರಿನ ಸಂಗ್ರಹ ಮಟ್ಟವನ್ನು ಕಾಯ್ದುಕೊಂಡು ಆಣೆಕಟ್ಟು ವಿಭಾಗದ ಅಧಿಕಾರಿಗಳು ಗೇಟು ಮತ್ತು ಎಂಪಿಸಿಎಲ್ ಮೂಲಕ 62 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಹರಿಸಲಾಗಿದೆ. ಬೆಂಗಳೂರಿನಲ್ಲಿ ಮಂಗಳವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಬುಧವಾರ ಬೆಳಗ್ಗೆ ಎಡದಂಡೆ ಮುಖ್ಯ ಕಾಲುವೆಗೆ 1200 ಕ್ಯೂಸೆಕ್ ನೀರು ಬಿಡಲಾಗಿದೆ.

ಈ ವೇಳೆ ನಿಗಮದ ಮುಖ್ಯ ಅಭಿಯಂತರ ಆರ್. ಮಂಜುನಾಥ ಮಾತನಾಡಿ, ಮಹಾರಾಷ್ಟçದಲ್ಲಿ ನಿರಂತರ ಮಳೆಯಿಂದ ಬಸವಸಾಗರ ಜಲಾಶಯ ಬಹುತೇಕವಾಗಿ ಭರ್ತಿಯಾಗಿದ್ದು, ಜಲಾಶಯದ ನೀರಿನ ಮಟ್ಟ ಕಾಯ್ದುಕೊಂಡು ಹೆಚ್ಚಿನ ನೀರು ನದಿಗೆ ಹರಿಸಲಾಗುತ್ತಿದ್ದು, ನದಿ ತೀರದ ಗ್ರಾಮಸ್ಥರು ತಮ್ಮ ಪಂಪ್‌ಸೆಟ್ ಮತ್ತು ಸರಕು ಸರಂಜಾಮುಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಯಾವುದೇ ಕಾರಣಕ್ಕೂ ಮೀನುಗಾರರು ನದಿಗೆ ಇಳಿಯಬಾರದು ಎಂದು ಅವರು ತಿಳಿಸಿದ್ದಾರೆ.

ಅಧೀಕ್ಷಕ ಅಭಿಯಂತರ ರಮೇಶ ಜಿ.ರಾಠೋಡ್, ಆಣೆಕಟ್ಟು ವಿಭಾಗದ ಕರ‍್ಯನಿರ್ವಾಹಕ ಅಭಿಯಂತರ ಅಶೋಕರೆಡ್ಡಿ ಪಾಟೀಲ್, ಎಇಇ ವಿಜಯಕುಮಾರ ಅರಳಿ, ಬಾಲಸುಬ್ರಮಣ್ಯ, ಮಲ್ಲಿಕಾರ್ಜುನ ಹಿರೇಮಠ, ನಾಗೇಶ, ಶೌಕತ್, ವಿರೇಶ ಜಂಜಿನಗಡ್ಡಿ, ಆದಂಶೇಫಿ, ಅಮರನಾಥ, ಅಂಬ್ರೇಶ ಇತರರಿದ್ದರು.