ಬೆಳಗಾವಿ : ಜಿಲ್ಲೆಯಲ್ಲಿ ಲೋಕಸಭಾ ಉಪ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಕ್ರಮ ಹಣ, ಮದ್ಯ ಸಾಗಣೆ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಇಲ್ಲಿಯವರೆಗೆ 62.55 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಹರೀಶಕುಮಾರ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ತೆರೆದಿರುವ 27 ಚೆಕ್‌ಪೋಸ್ಟ್‌ಗಳಲ್ಲಿ ಎಸ್‌ಎಸ್‌ಟಿ ತಂಡಗಳು ಕೈಗೊಂಡ ಕಾರ್ಯಾಚರಣೆ ವೇಳೆ ಒಟ್ಟು 62,55,510 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ದಾಖಲೆ ಪರಿಶೀಲನೆ ಬಳಿಕ 19,83,890 ಲಕ್ಷ ರೂ. ಹಣವನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಲಾಗಿದೆ. ಇನ್ನುಳಿದ 42,71,620 ರೂ. ನಿಯಮಾವಳಿ ಪ್ರಕಾರ ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲಾಗಿದೆ ಎಂದರು.
ಅಬಕಾರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 11.25 ಲಕ್ಷ ರೂ. ಮೌಲ್ಯದ 4,020 ಲೀಟರ್ ಮದ್ಯ, 42.26 ಲಕ್ಷ ರೂ. ಮೌಲ್ಯದ ಒಟ್ಟು 16 ಬೈಕ್‌ಗಳು, 1 ಕಂಟೇನರ್, 1 ಟ್ಯಾಂಕರ್, 4 ಕಾರು ಹಾಗೂ ಒಂದು ಜೀಪ್ ವಶಪಡಿಸಿಕೊಳ್ಳಲಾಗಿದೆ. 128 ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ 22 ದೂರುಗಳು ಸ್ವೀಕೃತವಾಗಿವೆ. ಆ ಪೈಕಿ 18 ಪ್ರಕರಣಗಳನ್ನು ಪರಿಶೀಲಿಸಿ ಒಟ್ಟಾರೆ 56,000 ರೂ. ದಂಡ ವಿಧಿಸಲಾಗಿದೆ. 3 ಪ್ರಕರಣಗಳಿಗೆ ಸಂಬಂಧಿಸಿ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಎಲ್ಲ ನಗರ ಪ್ರದೇಶಗಳಲ್ಲಿ ಮಾರ್ಷಲ್ಗಳನ್ನು ನೇಮಿಸಿ, ದಂಡ ವಿಧಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲು ನಿರ್ಧರಿಸಲಾಗಿದೆ ಎಂದು ಡಾ. ಕೆ.ಹರೀಶಕುಮಾರ ತಿಳಿಸಿದ್ದಾರೆ.
ಪಥ ಸಂಚಲನ: ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಭದ್ರತೆ ವಿಚಾರವಾಗಿ ಸಾರ್ವಜನಿಕರಲ್ಲಿ ವಿಶ್ವಾಸ ವೃದ್ಧಿಸಲು ನಗರದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಹಾಗೂ ಇತರ ಭದ್ರತಾ ಪಡೆಗಳ ಪಥ ಸಂಚಲನಕ್ಕೆ ಜಿಲ್ಲಾ ಚುನಾವಣಾಧಿಕಾರಿ ಡಾ.ಹರೀಶಕುಮಾರ ಹಸಿರು ನಿಶಾನೆ ತೋರಿಸುವ ಮೂಲಕ ಶನಿವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸುಗಮ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ಈಗಾಗಲೇ ಕೈಗೊಳ್ಳಲಾಗಿದೆ. ಸಾರ್ವಜನಿಕರು ನಿರ್ಭೀತಿಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು. ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್, ಡಿಸಿಪಿ ಯಶೋದಾ ವಂಟಗೋಡಿ, ಅಪರಾಧ ವಿಭಾಗದ ಡಿಸಿಪಿ ಮುತ್ತುರಾಜ್, ಎಸಿಪಿ ನಾರಾಯಣ ಭರಮನಿ, ಎಸಿಪಿ ಚಂದ್ರಪ್ಪ ಇತರರು ಇದ್ದರು.