ಜಿಲ್ಲೆ

615 ಗ್ರಾಂ ಚಿನ್ನಾಭರಣ, 17.90 ಲಕ್ಷ ನಗದು ವಶ

ವಿಜಯವಾಣಿ ಸುದ್ದಿಜಾಲ ಧಾರವಾಡ
ಯಕ್ಸಂಬಾದ ಶ್ರೀ ಬೀರೇಶ್ವರ ಕೋ ಆಪರೇಟಿವ್ ಸೊಸೈಟಿಯ ಧಾರವಾಡ ಶಾಖೆಯಲ್ಲಿ ಡಿ. 31ರ ರಾತ್ರಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸ್ ತಂಡ ಭೇದಿಸಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿ ಕಳವಾಗಿದ್ದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ರಮಣ ಗುಪ್ತಾ ಹೇಳಿದರು.
ನಗರದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿ ಯುವಕ ಬೀರೇಶ್ವರ ಕೋ ಆಪರೇಟಿವ್ ಸೊಸೈಟಿಯ ಮಾಜಿ ಉದ್ಯೋಗಿ. ಈತ ಬ್ಯಾಂಕ್ ಉದ್ಯೋಗಿಯ ಸ್ನೇಹ ಬೆಳೆಸಿ ನಕಲಿ ಚಾವಿ ಮಾಡಿಸಿಕೊಂಡಿದ್ದ. ಡಿ. 31ರಂದು ರಾತ್ರಿ ಸೊಸೈಟಿಯ ಬೀಗ ಮುರಿದು ಲಾಕರ್‌ನಲ್ಲಿದ್ದ ನಗದು ಹಾಗೂ ಗ್ರಾಹಕರು ಅಡವಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ. ಪ್ರಕರಣದ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಂದ 615 ಗ್ರಾಂ ತೂಕದ 21 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 17.90 ಲಕ್ಷ ರೂ. ನಗದು ಸೇರಿ 39.54 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ತನಿಖಾ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗುವುದು ಎಂದು ರಮಣ ಗುಪ್ತಾ ತಿಳಿಸಿದರು.