ಜಿಲ್ಲೆ

ಧಾರವಾಡ ಜಿಲ್ಲೆಯಲ್ಲಿ ವಿವಿಧ ಕಂಪನಿಗಳಿಂದ 6 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮೆ್ಮೕಳನದಲ್ಲಿ ಆದ ಒಡಂಬಡಿಕೆಯಂತೆ ಪ್ರತಿಷ್ಠಿತ ಕಂಪನಿಗಳು ನಗರ ಸೇರಿ ಧಾರವಾಡ ಜಿಲ್ಲೆಯ ವಿವಿಧೆಡೆ 6 ಸಾವಿರ ಕೋಟಿ ರೂ. ಬಂಡವಾಳ ಹೂಡಲಿವೆ ಎಂದು ಬೃಹತ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಮಹಾನಗರ ಪಾಲಿಕೆ ಅನುದಾನದಲ್ಲಿ ಉದಯನಗರದ ಶಿವ ಗಣೇಶ ದೇವಸ್ಥಾನಲ್ಲಿ ನಿರ್ವಿುಸಿರುವ ಸಭಾಭವನ ಉದ್ಘಾಟಿಸಿ ಅವರು ಮಾತನಾಡಿದರು. ಬಂಡವಾಳ ಹೂಡಿಕೆಯಿಂದ ಐಟಿ, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಫ್​ಎಂಜಿಸಿ ಸೇರಿ ಹಲವು ವಿಭಾಗಗಳಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಜಿಲ್ಲೆಯ 20ರಿಂದ 30 ಸಾವಿರ ಯುವಕರಿಗೆ ಉದ್ಯೋಗ ದೊರಕಲಿದೆ ಎಂದರು.

ರಸ್ತೆ ಕಾಮಗಾರಿಗೆ ಚಾಲನೆ: ಮಯೂರಿ ಎಸ್ಟೇಟ್​ನಲ್ಲಿ ಲೋಕೋಪಯೋಗಿ ಇಲಾಖೆಯಿಂದ 3 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸುತ್ತಿರುವ ರಸ್ತೆ ಕಾಮಗಾರಿಗೆ ಸಚಿವ ಶೆಟ್ಟರ್ ಭೂಮಿಪೂಜೆ ನೆರವೇರಿಸಿದರು. ನಂತರ ಇಂದಿರಾ ನಗರ ರಸ್ತೆ ಕಾಮಗಾರಿ ವೀಕ್ಷಿಸಿದರು. ಒಟ್ಟು 3 ಕಿಮೀ ಉದ್ದದ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಮಾಜಿ ಮಹಾಪೌರ ವೀರಣ್ಣ ಸವಡಿ, ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ, ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು, ಇತರರಿದ್ದರು.

ತೋಳನಕೆರೆಗೆ ಭೇಟಿ, ಕಾಮಗಾರಿ ಪರಿಶೀಲನೆ: ಹುಬ್ಬಳ್ಳಿ ತೋಳನಕೆರೆಗೆ ಮಂಗಳವಾರ ಭೇಟಿ ನೀಡಿದ ಸಚಿವ ಜಗದೀಶ ಶೆಟ್ಟರ್, 15.57 ಕೋಟಿ ರೂ. ವೆಚ್ಚದಲ್ಲಿ ಹá--ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಮಕ್ಕಳು, ವೃದ್ಧರನ್ನು ಗಮನದಲ್ಲಿಟ್ಟುಕೊಂಡು ಉದ್ಯಾನ ನಿರ್ವಿುಸಿ. ಗುಣಮಟ್ಟದ ಪೇವರ್ಸ್ ಅಳವಡಿಸಬೇಕು. ಕೆರೆಯ ನೈಸರ್ಗಿಕ ಪರಿಸರ ಕಾಪಾಡಿ, ಉದ್ಯಾನ ಅತಿಕ್ರಮಣ, ಅನಧಿಕೃತ ಪ್ರವೇಶ ಮಾಡದಂತೆ ಸುತ್ತಲೂ ಎತ್ತರದ ಕಾಂಪೌಡ್ ನಿರ್ವಿುಸಬೇಕು. ಅನೈತಿಕ ಚಟುವಟಿಕೆಗೆ ಅವಕಾಶ ಮಾಡಿಕೊಡಬಾರದು ಎಂದರು. ವಿಮಾನ ನಿಲ್ದಾಣ ಪಕ್ಕದ ರಾಮಲಿಂಗೇಶ್ವರ ನಗರ ಹಿಂಭಾಗದಿಂದ ಆಗಮಿಸುವ ಚರಂಡಿ ನೀರು ನೇರವಾಗಿ ಕೆರೆಗೆ ಸೇರುವುದನ್ನು ಗಮನಿಸಿದ ಸಚಿವರು, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ, ಅಧಿಕಾರಿಗಳಿದ್ದರು.