ತರೀಕೆರೆ: ಮುಂದಿನ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ 600 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ತರೀಕೆರೆ: ಮುಂದಿನ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ 600 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬಾವಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ತಾಲೂಕು ಆಡಳಿತ, ತಾಪಂ, ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಗುಂಪು ಆಟ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳ ಕೊರತೆ ನೀಗಿಸಲು ಗ್ರಾಮೀಣ ಶಾಲೆಗಳನ್ನು ಕ್ಲಸ್ಟರಿಂಗ್ ಮಾಡಿ ಪ್ರತಿ ತಾಲೂಕಿನಲ್ಲಿ 2 ರಿಂದ 3 ಕೆಪಿಎಸ್ ಸ್ಥಾಪಿಸಲಾಗುವುದು. ಇದರಿಂದ ಮಕ್ಕಳ ಅನುಪಾತಕ್ಕನುಗುಣವಾಗಿ ಶಿಕ್ಷಕರನ್ನು ನೇಮಿಸಲು ಸಹಕಾರಿಯಾಗುವುದಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಜತೆಗೆ ಮಕ್ಕಳಿಗೆ ವಾಹನ ಸೌಕರ್ಯ ಕಲ್ಪಿಸುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದರು.
ಕೆಪಿಎಸ್‌ಗಳಲ್ಲಿ ಸಂಗೀತ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲಾಗುವುದು. ಮಕ್ಕಳಿಗೆ ಭಾರವಾಗುತ್ತಿರುವ ಪುಸ್ತಕದ ಹೊರೆ ತಗ್ಗಿಸಲಾಗುವುದು. ಶಾಲೆಗಳಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ ವಿತರಿಸಲಾಗುವುದು. ಶಾಲಾ ಮಕ್ಕಳ ಅನುಕೂಲಕ್ಕಾಗಿ ರಾಜ್ಯದಲ್ಲಿ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್ ಒದಗಿಸಲಾಗುವುದು. ಮುಂದಿನ ಸಾಲಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳುವ ಮಕ್ಕಳಿಗೆ ಮೂರು ಬಾರಿ ಬೋರ್ಡ್ ಎಕ್ಸಾಂ ನಡೆಸಲಾಗುವುದು ಎಂದು ಹೇಳಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಕ್ರೀಡಾಕೂಟ ಆಯೋಜಿಸುವುದರಿಂದ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ. ಮಳೆಯ ಕೊರತೆಯಲ್ಲೂ ಭದ್ರಾ ಮೇಲ್ದಂಡೆ ಯೋಜನೆ ಕಾಲುವೆಯಿಂದ ದಿನಕ್ಕೆ 700 ಕ್ಯೂಸೆಕ್ ನೀರನ್ನು ಕ್ಷೇತ್ರ ವ್ಯಾಪ್ತಿಯ ವಿವಿಧ ಕೆರೆಗಳಿಗೆ ಹರಿಸಲಾಗುತ್ತಿದ್ದು, ಇದರಿಂದ ಕೃಷಿ ಚಟುವಟಿಕೆ ಮತ್ತು ಹೈನುಗಾರಿಕೆಗೆ ಉಪಯುಕ್ತವಾಗಲಿದೆ ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ. ಹೀಗಾಗಿ ಮಕ್ಕಳು ಹಿಂಜರಿಕೆ ಇಲ್ಲದೆ ಇಂಥ ಕ್ರೀಡಾಕೂಟದಲ್ಲಿ ಸ್ಪರ್ಧೆ ಮಾಡಬೇಕು ಎಂದು ಹೇಳಿದರು.
ಎಸಿ ಡಾ. ಕೆ.ಜೆ.ಕಾಂತರಾಜ್, ಡಿಡಿಪಿಐ ಜಿ.ರಂಗನಾಥಸ್ವಾಮಿ, ಪುರಸಭೆ ಅಧ್ಯಕ್ಷ ಪರಮೇಶ್, ತಹಸೀಲ್ದಾರ್ ವಿ.ಎಸ್.ರಾಜೀವ್, ಇಒ ಎಸ್.ಗೀತಾ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಿ.ಎಸ್.ವೆಂಕಟೇಶ್, ಬಿಇಒ ಟಿ.ಗೋವಿಂದಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಎಸ್.ಗಣೇಶ್, ಕ್ಷೇತ್ರ ಸಮನ್ವಯಾಧಿಕಾರಿ ಆರ್.ಉಮೇಶ್ ಇತರರಿದ್ದರು.