ಜಿಲ್ಲೆ

ಮೈಸೂರಿನಲ್ಲಿ 600 ಕೋಟಿ ರೂ. ಹೂಡಿಕೆ, 5000 ಹೊಸ ಉದ್ಯೋಗ ಸೃಷ್ಟಿ : ಸಚಿವ ಪ್ರಿಯಾಂಕ್ ಖರ್ಗೆ

ಮೈಸೂರು: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಹಾಗೂ ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್ ಅಸೋಸಿಯೇಷನ್ ಸಹಭಾಗೀತ್ವದಲ್ಲಿ ದೇಶದ ಮೊದಲ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ತಯಾರಿಕೆ (ಇಎಸ್‌ಡಿಎಂ) ‘ಟೆಕ್ ಯಾತ್ರೆ’ಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಇಎಸ್‌ಡಿಎಂ (ಎಲೆಕ್ಟ್ರಾನಿಕ್ಸ್ ಸಿಸ್ಟಂಸ್ ಡಿಸೈನ್ ಮತ್ತು ತಯಾರಿಕೆ) ವಲಯದಲ್ಲಿ ರಾಜ್ಯವನ್ನು ಜಾಗತಿಕ ನಾಯಕನನ್ನಾಗಿಸುವ ಗುರಿ ಹೊಂದಲಾಗಿದೆ. ವಿಶ್ವ ಮಟ್ಟದಲ್ಲಿ ಹೂಡಿಕೆಗಳ ಹರಿವು ಹೆಚ್ಚಿಸುವುದು, ಹೊಸ ಉದ್ಯಮಗಳನ್ನು ಆರಂಭಿಸಲು ಉತ್ತೇಜನ ನೀಡುವುದು ಮತ್ತು ರಾಜ್ಯದಲ್ಲಿ ಪ್ರಾರಂಭಿಸಿರುವ ಉದ್ಯಮಗಳನ್ನು ಉಳಿಸಿಕೊಳ್ಳುವ ವಾತಾವರಣವನ್ನು ಸೃಷ್ಟಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ‘ಟೆಕ್ ಯಾತ್ರೆ’ಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸೆಮಿಕಂಡಕ್ಟರ್, ಎಲಿಮೆಂಟ್ ಮ್ಯಾನೇಜ್ಮೆಂಟ್ ಸಿಸ್ಟಂ ಮತ್ತು ಘಟಕ ಗೋದಾಮುಗಳು ಸೇರಿದಂತೆ 20ಕ್ಕೂ ಹೆಚ್ಚು ಇಎಸ್‌ಡಿಎಂ ಕಂಪನಿಗಳು ಕ್ಲಸ್ಟರ್‌ಗೆ ಸೇರ್ಪಡೆಗೊಳ್ಳುತ್ತಿದ್ದು, 600 ಕೋಟಿ ರೂ.ಗಳ ಹೊಸ ಹೂಡಿಕೆ ಹರಿದು ಬಂದಿದೆ. ಹೆಚ್ಚುವರಿಯಾಗಿ 150 ಎಕರೆಗಳಷ್ಟು ಪಿಸಿಬಿ ಕ್ಲಸ್ಟರ್‌ಅನ್ನು ಸ್ಥಾಪಿಸುವ ಉದ್ದೇಶದಿಂದ ಪ್ರಸ್ತುತ ಪರೀಕ್ಷಾ ಸೌಲಭ್ಯವನ್ನು ವಿಸ್ತರಿಸಲು, ಮಲ್ಟಿಟೆನೆನ್ಸಿ ಕ್ಲೀನ್ ರೂಮ್‌ಅನ್ನು ಸೇರಿಸಲು ಉದ್ದೇಶಿಸಿದ್ದೇವೆ. ಇದು 5000 ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ. ಅಷ್ಟೇ ಅಲ್ಲದೆ, ಮಹಿಳಾ ಉದ್ಯೋಗಿಗಳನ್ನು ಸಬಲೀಕರಣಗೊಳಿಸಲು ಸಹಕಾರವಾಗಲಿದೆ. ಈ ಎಲ್ಲ ಬೆಳವಣಿಗೆಯಿಂದ ಜಾಗತಿಕ ಕಂಪನಿಗಳು ಮೈಸೂರಿನಲ್ಲಿ ಬೆಳೆಯಲು ಇದು ಉತ್ತಮ ಸಮಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಏಕ್‌ರೂಪ್ ಕೌರ್ ಮಾತನಾಡಿ, ಜಾಗತಿಕ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಜತೆ ಕೈ ಜೋಡಿಸಿರುವುದು ಮೈಸೂರು-ಬೆಂಗಳೂರನ್ನು ಸೆಮಿಕಾನ್ ಹಬ್‌ಆಗಿ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ. ಮೈಸೂರು ಸೆಮಿಕಾನ್ ತಯಾರಿಕೆ ಕ್ಷೇತ್ರದಲ್ಲಿ ಹಾಗೂ ಬೆಂಗಳೂರು ಸೆಮಿಕಾನ್ ವಿನ್ಯಾಸ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಬೆಳೆಯಲಿವೆ ಎಂದು ಭವಿಷ್ಯ ನುಡಿದರು.

ಹೊಸ ಕಾಯಿದೆಗಳು ಪ್ರತಿ ಹಂತದಲ್ಲೂ ಉದ್ಯಮಕ್ಕೆ ಬೇಕಾಗುವ ಎಲ್ಲ ಸವಲತ್ತುಗಳನ್ನು ನೀಡುತ್ತಾ, ರಾಜ್ಯದ ಆರ್ಥಿಕತೆಗೆ ಸಹಕಾರಿಯಾಗಿದೆ. ಇತ್ತೀಚಿನ ಏಲಿವೆಟ್ ಕಾರ್ಯಕ್ರಮ 923 ನವೋದ್ಯಮಗಳಿಗೆ ಒಟ್ಟು 223 ಕೋಟಿ ರೂ.ಗಳಷ್ಟು ಸಹಾಯ ಮಾಡಿದೆ. ಅದರಲ್ಲಿ ಸುಮಾರು 40 ನವೋದ್ಯಮಗಳು ಮೈಸೂರಿನಲ್ಲಿ ಪ್ರಾರಂಭವಾಗಿದೆ ಎಂದರು.

ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ.ನಾಯ್ಡು ಮಾತನಾಡಿ, ಮೈಸೂರಿನಲ್ಲಿ ದಿ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಅಭಿವೃದ್ಧಿಯಾಗುತ್ತಿದ್ದು, ಸುಮಾರು 1,60,000 ಚದರ ಅಡಿಗಳಷ್ಟು ವಿಸ್ತೀರ್ಣ ಹೊಂದಿದೆ. ಈ ವರ್ಷದ ಕೊನೆಗೆ ಕಾರ್ಯಾಚರಣೆ ಶುರು ಮಾಡಲಿದೆ ಎಂದು ತಿಳಿಸಿದರು.

ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಾ.ವಿ. ವೀರಪ್ಪನ್ ಮಾತನಾಡಿ, ನಮ್ಮ ಸಂಸ್ಥೆಯು ಪ್ರತಿ ಹೆಜ್ಜೆಯಲ್ಲೂ ಮೈಸೂರು ಹಾಗೂ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್ ಕಂಪನಿಗಳೊಂದಿಗೆ ಇರಲಿದ್ದು, ಜಾಗತಿಕ ಮಟ್ಟದಲ್ಲಿ ಹಾಗೂ ದೇಸಿಯವಾಗಿ ಅಗತ್ಯವಿರುವ ಉತ್ಪಾದನೆಯನ್ನು ಹೊಂದಲು ಅಗತ್ಯ ಸಹಾಯ ಮಾಡಲಿದೆ ಎಂದರು.

ವೇದಿಕೆಯಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ್ ಗುಪ್ತಾ, ಗ್ಲೋಬಲ್ ಫೌಂಡೇರಿಸ್ ಇಂಡಿಯಾ ಉಪಾಧ್ಯಕ್ಷ ಜಿತೇಂದ್ರ ಚಡ್ಡಾ ಹಾಗೂ ಇತರರು ಇದ್ದರು.