ಜಿಲ್ಲೆ

ಮಾತೃಪೂರ್ಣ ತರಕಾರಿ ಖರೀದಿಗೆ 60 ಪೈಸೆ!

ಗಂಗಾಧರ ಬಿ ವಿ

ಗಂಗಾಧರ್ ಬೈರಾಪಟ್ಟಣ ರಾಮನಗರ

ಗರ್ಭಿಣಿ ಮತ್ತು ಶಿಶುಗಳ ಅಪೌಷ್ಟಿಕತೆ ನಿವಾರಣೆ ಸಲುವಾಗಿ ಪೌಷ್ಟಿಕಾಂಶವುಳ್ಳ ಆಹಾರ ನೀಡುವ ಮಾತೃಪೂರ್ಣ ಯೋಜನೆಯಡಿ ತರಕಾರಿ ಖರೀದಿಸಲು ಪ್ರತಿ ಗರ್ಭಿಣಿಗೆ 60 ಪೈಸೆ ನಿಗದಿಪಡಿಸಿರುವ ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ಯೋಜನೆ ಜಾರಿಗೆ ತಂದಿವೆಯಾದರೂ ತರಕಾರಿ ಖರೀದಿಗೆ  ಪ್ರತಿ ದಿನ 60 ಪೈಸೆ ನಿಗದಿಪಡಿಸಿರುವುದು ಅಪಹಾಸ್ಯಕ್ಕೂ ಕಾರಣವಾಗಿದೆ.

50:50 ಅನುಪಾತದಲ್ಲಿ ರಾಜ್ಯ, ಕೇಂದ್ರ ಸರ್ಕಾರ ನೀಡುವ ಪೌಷ್ಟಿಕ ಆಹಾರದಲ್ಲಿ ಅನ್ನ-ಸಾಂಬಾರ್, ಮೊಟ್ಟೆ, ತರಕಾರಿ, ಹಾಲನ್ನು ಪ್ರತಿದಿನ ನೀಡಬೇಕು. ಇದಕ್ಕಾಗಿ ರಾಜ್ಯ ವಲಯದ ಪಾಲು ಪ್ರತಿ ಗರ್ಭಿಣಿಗೆ ದಿನವೂ 11.50 ರೂ. ಖರ್ಚು ಮಾಡಬೇಕು. ಪ್ರಸ್ತುತ ಸರ್ಕಾರ ಮೊಟ್ಟೆಗೆ 6 ರೂ. ಹಾಲು ಮತ್ತು ಸಕ್ಕರೆ 4.90 ರೂ., ಹಾಗೂ ತರಕಾರಿಗೆ 60 ಪೈಸೆ ನಿಗದಿ ಮಾಡಿದೆ. ಈ ಹಿಂದೆ ತರಕಾರಿಗೆ 2 ರೂ. ನಿಗದಿ ಮಾಡಕಲಾಗಿತ್ತು. ವರ್ಷದ ಹಿಂದೆ ಈ ಹಣ ನೀಡುವುದನ್ನು ನಿಲ್ಲಿಸಲಾಗಿದೆ. ಈಗ ಮತ್ತೆ ತರಕಾರಿಗೆ 60 ಪೈಸೆ ನಿಗದಿ ಮಾಡಿದ್ದು, ಯಾವ ಲೆಕ್ಕದಲ್ಲಿ ಎನ್ನುವುದು ಪ್ರಶ್ನೆ.

ಕಾರ್ಯಕರ್ತೆಯರ ಪೀಕಲಾಟ

ಅಂಗನವಾಡಿಗಳ ಮೂಲಕವೇ ಗರ್ಭಿಣಿಯರಿಗೆ ಯೋಜನೆ ತಲುಪಿಸಲಾಗುತ್ತದೆ. ಕಾರ್ಯಕರ್ತೆಯರು ಇದರ ಜವಾಬ್ದಾರಿ ಹೊತ್ತಿದ್ದು, 60 ಪೈಸೆಗೆ ಯಾವ ತರಕಾರಿ ಖರೀದಿಸಬೇಕು ಎಂದು ಸರ್ಕಾರವೇ ತಿಳಿಸಬೇಕು ಎನ್ನುವ ಪ್ರಶ್ನೆ ಮುಂದಿಟ್ಟಿದ್ದಾರೆ. ಹೆಚ್ಚಿನ ಸಂಖ್ಯೆಯ ಗರ್ಭಿಣಿಯರು ಇದ್ದರೆ ಎಲ್ಲ ಹಣವನ್ನು ಒಗ್ಗೂಡಿಸಿ ಒಂದಿಷ್ಟು ತರಕಾರಿ ತರಬಹುದು. ಆದರೆ ಬಹುತೇಕ ಕಡೆಗಳಲ್ಲಿ 2-5 ಗರ್ಭಿಣಿಯರು ಇದ್ದು, ಈ ಹಣದಿಂದ ಏನನ್ನೂ ಖರೀದಿಸಲು ಸಾಧ್ಯವಿಲ್ಲ. ತಕ್ಷಣವೇ ಈ ನಿರ್ಧಾರ ಹಿಂಪಡೆದು ಹೆಚ್ಚಿನ ಹಣ ಬಿಡುಗಡೆ ಮಾಡಬೇಕಿದೆ. ಇಲ್ಲವಾದರೆ ಮಹಾತ್ವಾಕಾಂಕ್ಷಿ ಯೋಜನೆಯೊಂದು ಮಣ್ಣುಪಾಲಾಗಲಿದೆ.

ಇತರ ಆಹಾರವೂ ರುಚಿಸಿಲ್ಲ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮೂಲಕ ಅಂಗನವಾಡಿಗಳಿಗೆ ಪೂರೈಕೆ ಆಗುತ್ತಿರುವ ಆಹಾರ ಗುಣ ಮತ್ತು ರುಚಿ ಬಗ್ಗೆಯೂ ವ್ಯಾಪಕ ಟೀಕೆ ಕೇಳಿ ಬಂದಿದೆ. ಆಯಾ ಜಿಲ್ಲೆಯ ಆಹಾರ ಪದ್ಧತಿಗೆ ಅನುಗುಣವಾಗಿ ಹಿಂದೆ ಆಹಾರ ಪೂರೈಕೆ ಆಗುತ್ತಿತ್ತು. ಆದರೆ ರಾಜ್ಯದಲ್ಲಿ ಒಬ್ಬನೇ ವ್ಯಕ್ತಿಗೆ ಟೆಂಡರ್ ನೀಡಿದ್ದು, ಇವರು ನೀಡುತ್ತಿರುವ ಗೋದಿ ಉಪ್ಪಿಟ್ಟಿನ ಮಿಕ್ಸ್ ಸೇರಿ ಯಾವುದೂ ಗರ್ಭಿಣಿ, ಮಕ್ಕಳಿಗೆ ಬೇಡವಾಗಿದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು.

ಬೆಲೆ ಹೆಚ್ಚಳವಾಗಿರುವಾಗ 60 ಪೈಸೆಗೆ ತರಕಾರಿ ಖರೀದಿಸುವುದು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವುದು ಹೇಗೆ? ಸರ್ಕಾರ ಪರಿಶೀಲಿಸಿ ಅನುದಾನ ಹೆಚ್ಚಿಸಬೇಕು.
 ಜಯಲಕ್ಷ್ಮೀ, ಜಿಲ್ಲಾ ಸಂಚಾಲಕಿ, ರಾಜ್ಯ ಅಂಗನವಾಡಿ ನೌಕರರ ಸಂಘ