ಜಿಲ್ಲೆ

40 ಸಾವಿರ ಕಂದಕಗಳಲ್ಲಿ 6 ಕೋಟಿ ಲೀಟರ್ ನೀರು

ನರಗುಂದ: ತಾಲೂಕಿನ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿ ಸಾಮೂಹಿಕ ಬದು ನಿರ್ಮಾಣ ಅಭಿಯಾನದ ಉದ್ದೇಶ ಯಶಸ್ವಿಯಾಗಿದೆ.

ಏಪ್ರಿಲ್, ಮೇನಲ್ಲಿ ದುಡಿಯೋಣ ಬಾ ಮತ್ತು ಸ್ತ್ರೀ ಚೇತನ ಅಭಿಯಾನದಡಿ ತಾಲೂಕಿನ 13 ಗ್ರಾಪಂಗಳಲ್ಲಿ ಸಾಮೂಹಿಕ ಬದು ನಿರ್ಮಾಣ ಕೈಗೊಳ್ಳಲಾಗಿದೆ. ಬೇಸಿಗೆಯಲ್ಲಿ ಕೂಲಿಕಾರರಿಗೆ ನಿರಂತರ ಕೆಲಸ ಕೊಡುವ ಜತೆಗೆ ರೈತರ ಜಮೀನಿನಲ್ಲಿ ಬದು ನಿರ್ವಣಕ್ಕೆ ಆದ್ಯತೆ ನೀಡಲಾಯಿತು. ತಾಲೂಕಿನಲ್ಲಿ 17484 ನೋಂದಾಯಿತ ಕೂಲಿಕಾರರು ಅಭಿಯಾನದಲ್ಲಿ ಭಾಗಿಯಾಗಿದ್ದು, 80302 ಮಾನವ ದಿನ ಸೃಜನೆಯಾಗಿದೆ. 2200 ಎಕರೆಯಲ್ಲಿ 10*10*1, 10*5*2 ಅಳತೆಯ 40 ಸಾವಿರ ಕಂದಕ ನಿರ್ಮಾಣ ಮಾಡಲಾಗಿದೆ. ಈ ಕಂದಕಗಳಲ್ಲಿ ಅಂದಾಜು 6 ಕೋಟಿ ರೂ. ಲೀಟರ್ ಮಳೆ ಸಂಗ್ರಹ ನೀರು ಸಂಗ್ರಹವಾಗಿದೆ.

ಎಲ್ಲೆಲ್ಲಿ ಬದು ಕಾಮಗಾರಿ: ಚಿಕ್ಕನರಗುಂದ, ಕೊಣ್ಣೂರು, ಬೆನಕನಕೊಪ್ಪ, ಬೈರನಹಟ್ಟಿ, ಬನಹಟ್ಟಿ, ವಾಸನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಕಿರು ಜಲಾನಯನ ಮಾದರಿಯೊಳಗೆ ಯೋಜನೆ ರೂಪಿಸಿ, ಸಾಮೂಹಿಕ ಬದು ನಿರ್ಮಾಣ ಮಾಡಲಾಗಿದೆ. ಸುರಕೋಡ ಗ್ರಾಪಂ ವ್ಯಾಪ್ತಿಯಲ್ಲಿಯೇ 1866 ಮಾನವ ದಿನ ಸೃಜಿಸಿ 350ಕ್ಕೂ ಅಧಿಕ ಕಂದಕ ನಿರ್ವಿುಸುವ ಗುರಿ ಹೊಂದಲಾಗಿತ್ತು. ಅಂದಾಜು 37 ಹೆಕ್ಟೇರ್ ಪ್ರದೇಶದಲ್ಲಿ 356 ಜನ ಅಕುಶಲ ಕೂಲಿಕಾರರು ಐದು ದಿನಗಳಿಂದ ಕೆಲಸ ಮಾಡುತ್ತಿದ್ದು, 890 ಕಂದಕ ನಿರ್ಮಾಣ ಮಾಡಿದ್ದಾರೆ. 7 ಲಕ್ಷ ರೂ. ವೆಚ್ಚದಲ್ಲಿ ಬದು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ.

ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಜಮೀನಿನಲ್ಲಿ ಬಿದ್ದ ನೀರು ಭೂಮಿಯಲ್ಲಿ ಇಂಗಿ, ನಂತರ ಹರಿದು ಬಂದು ಕಂದಕಗಳಲ್ಲಿ ಸಂಗ್ರಹಗೊಂಡಿವೆ. ಇದರಿಂದ ಜಮೀನಿನಲ್ಲಿನ ಮಣ್ಣಿನ ಸವಕಳಿ ತಪ್ಪಿದೆ. ಭೂಮಿಯಲ್ಲಿ ನೀರು ಇಂಗಿರುವುದರಿಂದ ರೈತರಿಗೆ ಅನುಕೂಲವಾಗಲಿದೆ.

ನಮ್ಮ ಜಮೀನಿನಲ್ಲಿ ಬದು ಇರಲಿಲ್ಲ. ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಖಾತ್ರಿ ಯೋಜನೆಯಡಿ ನಮ್ಮ ಜಮೀನಿಗೆ ಬದು ಹಾಕಿಸಿಕೊಡಲು ಮನವಿ ಮಾಡಿದ್ದೆ. ಈ ವರ್ಷ ನಮ್ಮ ಜಮೀನಿಗೆ ಬದು ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ. ಸೋಮವಾರ ಮಳೆಗೆ ಕಂದಕಗಳಲ್ಲಿ ನೀರು ತುಂಬಿರುವುದು ಬಹಳಷ್ಟು ಅನುಕೂಲವಾಗಿದೆ ಎನ್ನುತ್ತಾರೆ ರೈತ ಬಸಪ್ಪ ಡಂಬಳ.

ನರೇಗಾ ಯೋಜನೆಯಡಿ ವೈಜ್ಞಾನಿಕವಾಗಿ ಕಿರು ಜಲಾನಯನ ಮಾದರಿಯೊಳಗೆ ಯೋಜನೆ ರೂಪಿಸಿ ಭೌಗೋಳಿಕವಾಗಿ ಮೇಲ್ಮಟ್ಟದಿಂದ ಸಮುದಾಯ ಬದು ನಿರ್ಮಾಣ ಮಾಡುತ್ತಾ ಬರಲಾಗುವುದು. ಗ್ರಾಪಂ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡುವುದರ ಜತೆಗೆ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕಂದಕದಲ್ಲಿ ಮಳೆ ನೀರು ತುಂಬಿರುವುದರಿಂದ ಯೋಜನೆ ಯಶಸ್ವಿಯಾಗಿದೆ. | ಸಂತೋಷಕುಮಾರ ಪಾಟೀಲ, ಸಹಾಯಕ ನಿರ್ದೇಶಕ, ತಾಪಂ ನರಗುಂದ ತಾಲೂಕಿನ ಸುರಕೋಡ, ಚಿಕ್ಕನರಗುಂದ, ಕೊಣ್ಣೂರು, ಬೆನಕನಕೊಪ್ಪ, ಬೈರನಹಟ್ಟಿ, ಬನಹಟ್ಟಿ, ವಾಸನ ಗ್ರಾಪಂ ವ್ಯಾಪ್ತಿಯಲ್ಲಿ ಸಮುದಾಯ ಬದು ಕಾಮಗಾರಿ ನಿರ್ಮಾಣ ಮಾಡಲು ಈಗಾಗಲೇ ಕಾಮಗಾರಿಗಳು ಪ್ರಾರಂಭಗೊಂಡಿವೆ. ಕೂಲಿಕಾರರು ರೈತರ ಜಮೀನಿನಲ್ಲಿ ಕಂದಕ ಬದುಗಳನ್ನು ನಿರ್ಮಾಣ ಮಾಡಿದ್ದರಿಂದ ಎರಡು ದಿನಗಳಿಂದ ಸುರಿದ ಮಳೆಗೆ ಕಂದಕಗಳಲ್ಲಿ ನೀರು ಸಂಗ್ರಹವಾಗಿವೆ. ಯೋಜನೆ ಉದ್ದೇಶ ಈಡೇರಿದೆ. | ಎಸ್.ಕೆ. ಇನಾಮದಾರ, ತಾಪಂ ಇಒ ನರಗುಂದ