ಜಿಲ್ಲೆ

ಜಿಲ್ಲೆಗೆ 60 ಕೋಟಿ ರೂ ಬಿಡುಗಡೆ

Hassan

ಹಾಸನ: ಕರೊನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗಕ್ಕೆ ನೆರವಾಗಲಿ ಎಂಬ ಉದ್ದೇಶದಿಂದ ಜಿಲ್ಲೆಗೆ ಕಾರ್ಮಿಕ ಇಲಾಖೆಯಿಂದ 60 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

ಜಿಲ್ಲೆಯಲ್ಲಿ 1572 ಕ್ಷೌರಿಕರು ಹಾಗೂ 2630 ಅಗಸರು ಪರಿಹಾರಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. 35 ಸಾವಿರ ಕಟ್ಟಡ ಕಾರ್ಮಿಕರಿಗೆ ಹಾಗೂ ನರೇಗಾ ಅಡಿ ಕೆಲಸ ಮಾಡಿದ 24 ಸಾವಿರ ಜನರಿಗೆ ತಲಾ 5 ಸಾವಿರ ರೂ. ಪರಿಹಾರ ದೊರೆತಿದ್ದು ಅಗಸರು ಹಾಗೂ ಕ್ಷೌರಿಕರಿಗೆ ಇನ್ನೆರಡು ದಿನಗಳಲ್ಲಿ ಹಣ ತಲುಪಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಮದುವೆ, ಶಾಲಾ ಶುಲ್ಕ ಹಾಗೂ ಇತರ ತುರ್ತು ಸಮಸ್ಯೆಗೆ ಸಿಲುಕಿದ್ದವರಿಗೆ ನೀಡುವಂತೆ 9 ಕೋಟಿ ರೂ. ಅನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ ಎಂದರು.

ಹಿಮತ್ ಸಿಂಗ್ ಕಾ ಕಾರ್ಖಾನೆಗೆ ನೋಟಿಸ್: ಆರ್ಥಿಕವಾಗಿ ತೊಂದರೆಗೆ ಸಿಲುಕಿರುವುದರಿಂದ ವೇತನ ನೀಡುವಲ್ಲಿ ವಿಳಂಬವಾದರೆ ಒಪ್ಪಿಕೊಳ್ಳಬಹುದು. ಆದರೆ ಪರಸ್ಪರ ಅಂತರ ಕಾಪಾಡಿಕೊಳ್ಳದಿದ್ದರೆ ಕ್ರಮ ಜರುಗಿಸಬೇಕಾಗುತ್ತದೆ. ನಗರದ ಹಿಮತ್ ಸಿಂಗ್ ಕಾ ಕಾರ್ಖಾನೆಗೆ ತೆರಳುವ ಮಹಿಳಾ ಕಾರ್ಮಿಕರನ್ನು ಬಸ್‌ನಲ್ಲಿ ಅಂತರ ಮರೆತು ಕರೆದೊಯ್ಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಉತ್ತರಿಸಿದರು.

ಪರಿಸ್ಥಿತಿ ಕೈ ಮೀರಿತು: ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಪರಿಸ್ಥಿತಿ ಕೈ ಮೀರಿದೆ. ಹೊರ ರಾಜ್ಯದ ನಿವಾಸಿಗಳನ್ನು ಕರೆಸಿಕೊಂಡಿದ್ದೆ ತೊಡಕಾ ಯಿತು. ನಿರೀಕ್ಷೆಗೆ ಮೀರಿ ಜನರು ವಾಪಸ್ಸಾದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಆದರೆ ಸರ್ಕಾರ ಎಲ್ಲವನ್ನೂ ವ್ಯವಸ್ಥಿತವಾಗಿ ನಿಭಾಯಿಸುತ್ತಿದೆ. ಇಂತಹದೊಂದು ಕಾಯಿಲೆ ಬರುತ್ತದೆಂಬ ಊಹೆ ಸಹ ಇರಲಿಲ್ಲ. ವಿದೇಶಗಳಿಗೆ ಹೋಲಿಸಿದರೆ ಭಾರತ ಕರೊನಾ ವಿರುದ್ಧದ ಹೋರಾಟದಲ್ಲಿ ಯಶ ಗಳಿಸಿದೆ ಎಂದರು.

ಸಮಯ ಪಾಲಿಸಿದ ಸಚಿವ: ನಿಗದಿಯಂತೆ ಮಂಗಳವಾರ ಬೆಳಗ್ಗೆ 10.30ಕ್ಕೆ ಜಿಲ್ಲೆಗೆ ಬರುವ ಮೂಲಕ ಸಚಿವ ಶಿವರಾಮ ಹೆಬ್ಬಾರ್ ಸಮಯಕ್ಕೆ ಆದ್ಯತೆ ನೀಡಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಅರ್ಧ ಗಂಟೆ ಸಮಾಲೋಚನೆ ನಡೆಸಿ ತಕ್ಷಣ ಬಿ. ಕಾಟಿಹಳ್ಳಿಯಲ್ಲಿರುವ ಕಾರ್ಮಿಕರ ವಿಮಾ ಚಿಕಿತ್ಸಾಲಯಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಕ್ಷಣವೇ ಅಲ್ಲಿಂದ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಕಾರ್ಮಿಕ ಇಲಾಖೆ ಮಂಡಳಿಗೆ ಮೀಸಲಿಟ್ಟಿರುವ 10 ಎಕರೆ ಸ್ಥಳ ವೀಕ್ಷಿಸಿ ಅಧಿಕಾರಿಗಳಿಗೆ ಸಲಹೆ ನೀಡಿ ದಿಢೀರನೆ ಕಾರು ಏರಿದರು. ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಚನ್ನರಾಯಪಟ್ಟಣದತ್ತ ಪ್ರಯಾಣ ಬೆಳೆಸಿದರು.