ಜಿಲ್ಲೆ

ಚನ್ನಗಿರಿ ತಾಲೂಕಲ್ಲಿ ಶೇ.60 ರಷ್ಟು ಬೆಳೆ ನಷ್ಟ

Davangere - Prakash Arali

ಚನ್ನಗಿರಿ: ತಾಲೂಕಿನಲ್ಲಿ ಸೆ.10 ರ ವರೆಗೆ ವಾಡಿಕೆಯಂತೆ 564 ಮಿಮೀ ಮಳೆ ದಾಖಲಾಗಬೇಕಿತ್ತು. ಆದರೆ, 341 ಮಿಮೀ ಮಾತ್ರ ಆಗಿದೆ. ಶೇ.41ರಷ್ಟು ಕೊರತೆಯಾಗಿದೆ.
ತಾಲೂಕಿನಲ್ಲಿ 45 ಸಾವಿರ ಹೆಕ್ಟೇರ್ ಪ್ರದೇಶ ಕೃಷಿ ಭೂಮಿ ಗುರುತಿಸಲಾಗಿದೆ. ಪ್ರಮುಖ ಬೆಳೆಯಾದ ಮೆಕ್ಕೆಜೋಳ 23 ಸಾವಿರ ಹೆ.ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ, ಭತ್ತ 11 ಸಾವಿರ ಹೆಕ್ಟೇರ್, ರಾಗಿ 4100 ಹೆ., ಅಲಸಂದೆ 2 ಸಾವಿರ ಹೆ., ತೊಗರಿ 1500 ಹೆ. ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಶೇ.60ರಷ್ಟು ಬೆಳೆ ನಷ್ಟವಾಗಿದೆ.
ತಾಲೂಕಿನ ಹೀರೆಉಡ, ದೇವರಹಳ್ಳಿ, ಕೊಂಡದಹಳ್ಳಿ, ಚಿಕ್ಕಬ್ಬಿಗೆರೆ, ಸಿದ್ದನಮಠ, ಕಾಕನೂರು, ಕುಳೇನೂರು, ಕಂಚುಗಾರನಹಳ್ಳಿ, ನಿಲೋಗಲ್ಲು, ಮರವಂಜಿ, ಕಲ್ಕರೆ ಸೇರಿದಂತೆ 13 ಗ್ರಾಮಗಳಲ್ಲಿ ಬೆಳೆ ಪರಿಶೀಲನೆ ಅಧಿಕಾರಿಗಳ ತಂಡ ಜಮೀನುಗಳಿಗೆ ಭೇಟಿ ನೀಡಿ ಮೂರು ವಿಧಗಳಲ್ಲಿ ಪರಿಶೀಲನೆ ನಡೆಸಿದೆ.
ನೀರಿನ ವ್ಯವಸ್ಥೆ ಕಲ್ಪಿಸಲು ಸಿದ್ಧತೆ
ಬರಪೀಡಿತ ಘೋಷಣೆ ಹಿನ್ನೆಲೆಯಲ್ಲಿ ಬೆಳೆ ನಷ್ಟದ ವರದಿ ಪಡೆದು ಪರಿಹಾರಕ್ಕಾಗಿ ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಲಾಗುತ್ತದೆ. ತಾಲೂಕಿನಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚನೆ ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ ತಕ್ಷಣ ನೀರಿನ ವ್ಯವಸ್ಥೆ ಕಲ್ಪಿಸಲು ಸಿದ್ಧವಿದ್ದೇವೆ. ದನಕರುಗಳ ಮೇವು ಖರೀದಿಸಲು ಮುಂದಾಗಿದ್ದೇವೆ ಎಂದು ತಹಸೀಲ್ದಾರ್ ಪಿ.ಎಸ್. ಯರ‌್ರಿಸ್ವಾಮಿ ವಿಜಯವಾಣಿಗೆ ತಿಳಿಸಿದ್ದಾರೆ.

ಮುಂಗಾರು ಸರಿಯಾದ ಸಮಯದಲ್ಲಿ ಆಗದೆ ಜೂನ್ ಹಾಗೂ ಜುಲೈ ಮೊದಲ ವಾರದಲ್ಲಿ ರೈತರು ಬಿತ್ತಿದ್ದರು. ಆಗಸ್ಟ್ ತಿಂಗಳಲ್ಲಿ ಮಳೆ ಬಾರದೆ ಬಿತ್ತನೆ ಮಾಡಿದ ಶೇ.60ರಷ್ಟು ಮೆಕ್ಕೆಜೋಳ ನಾಶವಾಗಿದೆ.
ಅರುಣ್ ಗುನ್ನಾ, ಕೃಷಿ ಇಲಾಖೆ ತಾಲೂಕು ನಿರ್ದೇಶಕ