ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 6 ಸಾವಿರದ ಗಡಿಯಲ್ಲಿ ನಿಂತಿದೆ. ಸೆಪ್ಟೆಂಬರ್ 1 ರಂದು ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 5 ಸಾವಿರದ ಗಡಿಗೆ ಮುಟ್ಟಿತ್ತು. 6 ದಿನಗಳಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ ಸುಮಾರು ಒಂದು ಸಾವಿರ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪರೀಕ್ಷೆಯನ್ನು ಹೆಚ್ಚು ಮಾಡಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚು ಬರುತ್ತಿದೆ. ಆದರೆ, ಸಾವಿನ ಸಂಖ್ಯೆ ಅತಿ ಕಡಿಮೆ ಇದೆ. ಜನ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಭಾನುವಾರ ಜಿಲ್ಲೆಯಲ್ಲಿ ಹೊಸದಾಗಿ 238 ಜನರಿಗೆ ಕರೊನಾ ಕಾಣಿಸಿಕೊಂಡಿದ್ದು, 97 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಎರಡು ಸಾವು ಸಂಭವಿಸಿದೆ.
ಕಾರವಾರದಲ್ಲಿ 23, ಅಂಕೋಲಾದಲ್ಲಿ 21, ಕುಮಟಾದಲ್ಲಿ 45, ಹೊನ್ನಾವರದಲ್ಲಿ 28, ಶಿರಸಿಯಲ್ಲಿ 35, ಸಿದ್ದಾಪುರದಲ್ಲಿ 18, ಯಲ್ಲಾಪುರದಲ್ಲಿ 28, ಮುಂಡಗೋಡಿನಲ್ಲಿ 10, ಹಳಿಯಾಳದಲ್ಲಿ 26, ಜೊಯಿಡಾದಲ್ಲಿ ನಾಲ್ವರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 5999 ಕ್ಕೆ ಏರಿಕೆಯಾಗಿದ್ದು, 1644 ಸಕ್ರಿಯ ಪ್ರಕರಣಗಳಿವೆ.
ಕಾರವಾರದಲ್ಲಿ 4, ಕುಮಟಾದಲ್ಲಿ 9, ಭಟ್ಕಳ ಮತ್ತು ಶಿರಸಿಯಲ್ಲಿ 22, ಹಳಿಯಾಳ ಮತ್ತು ದಾಂಡೇಲಿಯಲ್ಲಿ 30 ಜೊಯಿಡಾದಲ್ಲಿ 10 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಗುಣವಾದವರ ಸಂಖ್ಯೆ 4298 ಕ್ಕೆ ಏರಿಕೆಯಾಗಿದೆ. ಹೊನ್ನಾವರದಲ್ಲಿ ಒಬ್ಬ, ಕಾರವಾರದಲ್ಲಿ 63 ವರ್ಷದ ಒಬ್ಬ ವ್ಯಕ್ತಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಕರೊನಾದಿಂದ ಒಟ್ಟು ಮೃತರ ಸಂಖ್ಯೆ 58 ಕ್ಕೆ ಏರಿದೆ. ಮಾನಸಿಕ ಆರೋಗ್ಯ ಸಹಾಯವಾಣಿ: ಕೋವಿಡ್-19 ರ ಸಂಬಂಧ ಮಾನಸಿಕ ಆರೋಗ್ಯ ಸಲಹೆ ನೀಡಲು ಕ್ರಿಮ್್ಸ ಆಸ್ಪತ್ರೆಯಿಂದ ಸಹಾಯವಾಣಿ ಆರಂಭಿಸಲಾಗಿದೆ. ಭಾನುವಾರ ಕ್ರಿಮ್್ಸ ನಿರ್ದೇಶಕ ಡಾ. ಗಜಾನನ ನಾಯಕ ಸಹಾಯವಾಣಿ 7411264213 ಅನ್ನು ಉದ್ಘಾಟಿಸಿದರು. ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಶಂಕರ ರಾವ್, ಮನೋ ವೈದ್ಯರಾದ ಡಾ.ಜೋನಾಥನ್ ಎಲ್.ಶ್ರೀರಕ್ಷಾ ನಾಯಕ, ಡಾ.ಶಿವಕುಮಾರ ಜಿ ಇದ್ದರು. ಡಾ.ಮೋಹನಬಾಬು ಇದ್ದರು. ಕ್ರಿಮ್ಸ್ನ ಮನೋ ವಿಜ್ಞಾನ ವಿಭಾಗದಿಂದ ಈ ಸಹಾಯವಾಣಿ ನಿರ್ವಹಿಸಲಾಗುತ್ತಿದೆ. ಕೋವಿಡ್ ಸಂಬಂಧಿತ ಆತಂಕಗಳಿದ್ದಲ್ಲಿ ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಕ್ರಿಮ್್ಸ ಪ್ರಕಟಣೆ ತಿಳಿಸಿದೆ.
ರಾಜ್ಯಕ್ಕೆ ಹೋಲಿಸಿದರೆ ಕಡಿಮೆ: ರಾಜ್ಯದಲ್ಲಿ ಕರೊನಾ ಸಾವಿನ ಸಂಖ್ಯೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅತಿ ಕಡಿಮೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ತಿಳಿಸಿದ್ದಾರೆ. ಕಳೆದ ಏಳು ದಿನಗಳಲ್ಲಿ ರಾಜ್ಯದಒಟ್ಟಾರೆ ಕರೊನಾ ಸೋಂಕಿತರಲ್ಲಿ ಮೃತರ ಸಂಖ್ಯೆ ಶೇ.1.3 ರಷ್ಟಿದೆ. ಉತ್ತರ ಕನ್ನಡದಲ್ಲಿ ಈ ಪ್ರಮಾಣ ಶೇ.0.4 ರಷ್ಟಿದೆ. ಜಿಲ್ಲೆ ರಾಜ್ಯಲ್ಲಿ 26 ನೇ ಸ್ಥಾನದಲ್ಲಿದೆ ಎಂದಿದ್ದಾರೆ.