ಜಿಲ್ಲೆ

6 ಲಕ್ಷ ರೂ. ಉಳಿತಾಯ ಲೆಕ್ಕಪತ್ರ ಮಂಡನೆ

ಕುಶಾಲನಗರ: ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಫೆ.3ರಂದು ಜರುಗಿದ ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು-ವೆಚ್ಚಗಳ ಲೆಕ್ಕಪತ್ರವನ್ನು ಕುಶಾಲನಗರದ ಪರಿಷತ್ ಕಚೇರಿಯಲ್ಲಿ ಭಾನುವಾರ ಸಮ್ಮೇಳನದ ಹಣಕಾಸು ಉಪ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಮಂಡಿಸಿದರು.


ಸಮ್ಮೇಳನಕ್ಕೆ ಕುಶಾಲನಗರದ ವಿವಿಧ ವರ್ತಕರು ಹಾಗೂ ದಾನಿಗಳಿಂದ ಸಂಗ್ರಹಿಸಿದ ಒಟ್ಟು 13 ಲಕ್ಷ ರೂ.ಗಳ ಪೈಕಿ 8.70 ಲಕ್ಷ ರೂ. ಮೊತ್ತದಷ್ಟು ಸಮ್ಮೇಳನಕ್ಕೆ ಖರ್ಚಾಗಿದೆ. ಉಳಿಕೆಯಾದ ರೂ.6 ಲಕ್ಷ ರೂ. ಹಣವನ್ನು ನಿಖರ ಠೇವಣಿ ಇಟ್ಟು ಈ ಮೊತ್ತವನ್ನು ಕುಶಾಲನಗರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸಾಹಿತ್ಯ ಪರಿಷತ್ತಿನ ನಿವೇಶನ ಖರೀದಿ ಹಾಗೂ ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಿಸಲು ಬಳಸಿಕೊಳ್ಳಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.


ಕುಶಾಲನಗರ ತಾಲೂಕು ರಚನೆಗೊಂಡ ಬಳಿಕ ಎಲ್ಲರ ಸಹಕಾರದಿಂದ ತಾಲೂಕು ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ಸಂಘಟಿಸಲು ಸಹಕರಿಸಿದ ನಾಗರಿಕರು, ದಾನಿಗಳು, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಪ್ರಮುಖರಿಗೆ ಆರ್ಥಿಕ ಉಪ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಕೃತಜ್ಞತೆ ಸಲ್ಲಿಸಿದರು.


ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕುಶಾಲನಗರದ ಸಮ್ಮೇಳನದಲ್ಲಿ ಉಳಿಕೆಯಾದ ಹಣವನ್ನು ಮಡಕೇರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾ ಸಾಹಿತ್ಯ ಭವನ ನಿರ್ಮಾಣಕ್ಕೆ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.


ಇದಕ್ಕೆ ಪ್ರತಿಕ್ರಿಯಿಸಿದ ಸಮ್ಮೇಳನದ ಪದಾಧಿಕಾರಿಗಳು, ಸಮ್ಮೇಳನಕ್ಕೆ ಸ್ಥಳೀಯವಾಗಿ ಸಂಗ್ರಹಿಸಿದ ದೇಣಿಗೆಯನ್ನು ಸ್ಥಳೀಯವಾಗಿ ನಿರ್ಮಿಸಲಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿವೇಶನ ಖರೀದಿ ಹಾಗೂ ಕಟ್ಟಡ ನಿರ್ಮಾಣ ಮಾಡಲು ಅವಶ್ಯಕತೆ ಇರುವುದರಿಂದ ಈ ಮೊತ್ತವನ್ನು ಸ್ಥಳೀಯವಾಗಿ ಬಳಸಿಕೊಳ್ಳುವ ಕುರಿತು ನಿರ್ಧರಿಸಲಾಗಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ತಾವು ಸಹ ಸಹಕರಿಸುವುದಾಗಿ ಭರವಸೆ ನೀಡಿದರು. ಗೋಣಿಕೊಪ್ಪಲಿನಲ್ಲಿ ಮಾ.4 ಮತ್ತು 5 ರಂದು ನಡೆಯಲಿರುವ 16ನೇ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರೂ ಭಾಗವಹಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಕೇಶವಕಾಮತ್ ಮನವಿ ಮಾಡಿದರು.


ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಕುಶಾಲನಗರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ಸಿಗೆ ಎಲ್ಲ ರೀತಿಯಲ್ಲಿ ಸಹಕಾರ ಹಾಗೂ ನೆರವು ನೀಡಿದ ದಾನಿಗಳು, ಸಮಿತಿಯ ಸದಸ್ಯರು ಹಾಗೂ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದರು.

ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರೊ.ಎಚ್.ಬಿ. ಲಿಂಗಮೂರ್ತಿ, ಜಿಲ್ಲಾ ಕಸಾಪ ನಿರ್ದೇಶಕರಾದ ಮೆ.ನಾ.ವೆಂಕಟನಾಯಕ್, ಫ್ಯಾನ್ಸಿ ಮುತ್ತಣ್ಣ, ಮಂಜುನಾಥ್, ಟಿ.ಜಿ.ಪ್ರೇಮಕುಮಾರ್ ವಿವಿಧ ಸಮಿತಿಯ ಪ್ರಮುಖರಾದ ಕೆ.ಪಿ.ಚಂದ್ರಕಲಾ, ಎಂ.ವಿ.ನಾರಾಯಣ, ಎಚ್.ಬಿ.ಲಿಂಗಮೂರ್ತಿ, ವಿ.ಎಸ್.ಆನಂದಕುಮಾರ್, ಕಸಾಪ ಕೋಶಾಧಿಕಾರಿ ಕೆ.ವಿ.ಉಮೇಶ್, ವೆಂಕಟೇಶ ಪೂಜಾರಿ, ಬಿ.ಎ.ನಾಗೇಗೌಡ, ಎಂ.ಎನ್.ಚಂದ್ರಮೋಹನ್, ಸಬಲಂ ಭೋಜಣ್ಣರೆಡ್ಡಿ, ಟಿ.ಆರ್.ಪ್ರಭುದೇವ್ ಇತರರು ಇದ್ದರು.