ಶ್ರೀರಂಗಪಟ್ಟಣ: ಕ್ಷೇತ್ರದ 6 ಮಹಿಳಾ ಸಂಘಗಳಿಗೆ ಡಿಸಿಸಿ ಬ್ಯಾಂಕ್ ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಶೂನ್ಯ ಬಡ್ಡಿ ದರದಲ್ಲಿ 15 ಕೋಟಿ ರೂ. ಸಾಲ ವಿತರಣೆ ಮಾಡಲಾಗುತ್ತಿದ್ದು, ಮಹಿಳೆಯರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀ ರಂಗನಾಥಸ್ವಾಮಿ ಮೈದಾನದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ್ ವತಿಯಿಂದ ಆಯೋಜಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮತ್ತು ಮಾಹಿತಿ ನೀಡುವ ಬೃಹತ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ 236 ತಾಲೂಕುಗಳಲ್ಲಿ 223 ತಾಲೂಕು ಬರಪೀಡಿತವಾಗಿದ್ದು, ರೈತರಿಗೆ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬರ ಪರಿಹಾರ ಬರುವುದು ತಡವಾಗುತ್ತದೆಂದು ತಿಳಿದ ಹಿನ್ನೆಲೆಯಲ್ಲಿ ರೈತರಿಗೆ ಮೊದಲ ಹಂತದ ಪರಿಹಾರವಾಗಿ ತಲಾ 2000 ರೂ. ನೀಡಲಾಗುತ್ತಿದೆ. ರಾಜ್ಯದಲ್ಲಿ ಬರ ಎಂದು ತಿಳಿದ ತಕ್ಷಣ ಕಂದಾಯ ಸಚಿವರೊಂದಿಗೆ ಜಿಲ್ಲೆಗಳ ಪ್ರವಾಸ ಕೈಗೊಂಡು ರೈತರ ಕಷ್ಟಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ವರದಿ ಸಲ್ಲಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ 69 ಸಾವಿರ ಕೋಟಿ ರೂ. ಅನುದಾನ ಬೇಕಾಗಿದ್ದು, ಇವುಗಳ ನಡುವೆ ಸರ್ಕಾರ ಅಭಿವೃದ್ಧಿಯಲ್ಲೂ ಹಿಂದೆ ಉಳಿಯದೆ ರಸ್ತೆ ಅಭಿವೃದ್ಧಿಗೆ ಪ್ರತಿ ಜಿಲ್ಲೆಗೆ 50 ಕೋಟಿ ರೂ. ಅನುದಾನ ನೀಡಿದೆ. ಮಂಡ್ಯ ಜಿಲ್ಲೆ ಒಂದರಲ್ಲೇ ಅಂದಾಜು 47 ಲಕ್ಷ ಕುಟುಂಬಗಳಿಗೆ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಿಲ್ಲೊಂದನ್ನು ಪಡೆದುಕೊಂಡಿದ್ದಾರೆ ಎಂದರು.
ವಿರೋಧ ಪಕ್ಷಗಳಿಗೆ ಮಾತಿನಲ್ಲಿ ತಿವಿದ ಸಚಿವ: 5 ವರ್ಷದ ಹಿಂದೆ ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳೆಲ್ಲ ಚುನಾವಣೆಯಲ್ಲಿ ಸೋತಿದ್ದೆವು. ಅಂದು ಗೆದ್ದ ಜೆಡಿಎಸ್‌ನವರನ್ನು ಸರಪಳಿ ಹಾಕಿದ್ರೂ ಹಿಡಿಯೋಕೆ ಆಗಿರಲಿಲ್ಲ. ಅವರ ಆರ್ಭಟ, ಅಬ್ಬರದ ಭಾಷಣಗಳನ್ನು ನೋಡೋಕೆ ಆಗುತ್ತಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ರೀತಿ ಬಿಜೆಪಿ, ಜೆಡಿಎಸ್ ಮಾಡಲಿಲ್ಲ. ನಮ್ಮ ಮಾತನ್ನು ಉಳಿಸಿಕೊಂಡು ಜನರಿಗೆ ಯೋಜನೆಗಳನ್ನು ತಲುಪಿಸುತ್ತಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾಷಣ ಮಾಡಿಕೊಂಡು, ಸುಳ್ಳು ಹೇಳಿಕೊಂಡು ಇರಬಹುದಿತ್ತು. ಈ ಹಿಂದೆ ಇದ್ದ ಮಂಡ್ಯ ನಾಯಕರಿಂದ ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂಬುದು ಗೊತ್ತಿದೆ. ನಮ್ಮ ಸೇವೆಯನ್ನು ಜನರು ಗುರುತಿಸಬೇಕು, ಅದರ ಬಗ್ಗೆ ಅವರೇ ಮಾತನಾಡಬೇಕು, ಮಂಡ್ಯ ಜಿಲ್ಲೆ ಕಳೆದ 5 ವರ್ಷ ಹೇಗಿತ್ತು? ಏಳು ಜೆಡಿಎಸ್ ಶಾಸಕರು ಏನು ಸೌಲಭ್ಯ ಕೊಟ್ಟಿದ್ದಾರೆ? ಕೇಂದ್ರದಲ್ಲಿ ಕುಳಿತು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳುತ್ತಿದ್ದು, ಇಲ್ಲಿ ಇವರು ಅವರ ಮಾತಿಗೆ ಜಾಗಟೆ ತಗೊಂಡು ಬಾರಿಸುತ್ತಾರೆ ಎಂದು ಟೀಕಿಸಿದರು.
ರಾಜ್ಯದ ಸಂಸದರಿಗೆ ನಾಚಿಕೆ ಆಗುತ್ತಿಲ್ವಾ? ನಾವು ಕನ್ನಡಿಗರಿಗೆ ಮೋಸ ಮಾಡುತ್ತಿದ್ದೇವೆ ಅನಿಸುತ್ತಿಲ್ವಾ? ಇಲ್ಲಿಯವರೆಗೆ ಕೇಂದ್ರ ಸರ್ಕಾರ ಬರಗಾಲದ ಪರಿಹಾರ ನೀಡಿಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಜನರು ಉತ್ತರ ನೀಡಬೇಕು. ಕೇಂದ್ರ ಕೊಡುವುದನ್ನು ಕಾಯದೆ ರಾಜ್ಯ ಸರ್ಕಾರ ತಲಾ 2 ಸಾವಿರ ರೂ. ಬಿಡುಗಡೆ ಮಾಡಿದೆ. ಸ್ವಾತಂತ್ರೃ ಬಂದ ನಂತರ ಯಾರು ನಮ್ಮ ರೀತಿ ಗ್ಯಾರಂಟಿ ಯೋಜನೆ ನೀಡಿಲ್ಲ. ಆ ಯೋಜನೆಗಳನ್ನು ಜನರಿಗೆ ನಾವು ತಲುಪಿಸುತ್ತಿದ್ದೇವೆ ಎಂದರು.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಬಡವರು, ರೈತರು, ಮಹಿಳೆಯರಿಗೆ ಶಕ್ತಿ ನೀಡುವುದೇ ರಾಜ್ಯ ಸರ್ಕಾರದ ಉದ್ದೇಶವಾಗಿದ್ದು, ನಿಮ್ಮ ಕೈ ಬಲಪಡಿಸಲು 5 ಗ್ಯಾರಂಟಿಗಳನ್ನು ನೀಡಿದ್ದೇವೆ. ಸಂಸಾರದ ಆಧಾರ ಮಹಿಳೆ ಎಂದು ಮನಗಂಡ ಸರ್ಕಾರ ಮಹಿಳೆಯರಿಗೆ ಗೃಹಲಕ್ಷ್ಮಿಯೋಜನೆ ಜಾರಿಗೊಳಿಸಿ ಅವರನ್ನು ಆರ್ಥಿಕ ಸದೃಢರನ್ನಾಗಿಸಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಎಂಬ ನಿಟ್ಟಿನಲ್ಲಿ ರಾಜ್ಯಸರ್ಕಾರ ಸಾಕಷ್ಟು ಯೋಜನೆ ನೀಡಿ, ಮಹಿಳೆಯರ ಸ್ವಾತಂತ್ರೃ ಹಾಗೂ ಸಬಲೀಕರಣಕ್ಕೆ ಶಕ್ತಿ ಯೋಜನೆ ಜಾರಿಗೆ ತಂದಿದ್ದು, ಮಹಿಳೆ ಕಟ್ಟುಪಾಡುಗಳನ್ನು ಮೀರಿ ಹೊರಬಂದು ಕುಟುಂಬವನ್ನು ಮುನ್ನಡೆಸಿ ಸಮಾಜದಲ್ಲಿ ನಿರ್ಭೀತಿಯಿಂದ ಬದುಕುತ್ತಿದ್ದಾರೆ ಎಂದರು.
ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಚುನಾವಣಾ ಪೂರ್ವದಲ್ಲಿ ನೀಡಲಾಗಿದ್ದ 5 ಗ್ಯಾರಂಟಿಗಳನ್ನು ಶೇ. 100ರಷ್ಟು ಆಗದಿದ್ದರೂ ಸೇ. 99.99ರಷ್ಟು ಅನುಷ್ಠಾನ ಮಾಡಿ, ನುಡಿದಂತೆ ನಡೆದಿದ್ದೇವೆ. ಜನರನ್ನು ಆರ್ಥಿಕ ಸಬಲರನ್ನಾಗಿಸಲು ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಶಕ್ತಿ ಯೋಜನೆಗಳನ್ನು ನೀಡಲಾಗಿದೆ. ಇದರೊಂದಿಗೆ ಅಭಿವೃದ್ಧಿಗೂ ಅನುದಾನ ನೀಡಲಾಗಿದೆ. ಶ್ರೀರಂಗಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿಡಿಎಸ್, ದೇವರಾಜ, ವಿರಿಜಾ ಇನ್ನಿತರ ನಾಲೆಗಳ ಅಭಿವೃದ್ಧಿಗೆ 200 ಕೋಟಿ ರೂ. ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಲೋಕೋಪಯೋಗಿ ರಸ್ತೆ ಅಭಿವೃದ್ಧಿಗೆ 40 ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ ಕಾವೇರಿ ಕುಡಿಯುವ ನೀರು ಒದಗಿಸಲು ರೂ 20 ೋಟಿ, ಯು.ಜಿ.ಡಿ ಅಭಿವೃದ್ಧಿಗೆ ರೂ 25 ಕೋಟಿ ರೂ. ಮೀಸಲಿಡಲಾಗಿದೆ ಎಂದರು.
ಕಳ್ಳಕಾಕರನ್ನು ಜಿಲ್ಲೆಗೆ ಸೇರಿಸಬೇಡಿ: ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಈ ಹಿಂದೆ 8 ಸಾವಿರ ಕೋಟಿ ರೂ.ಕೊಡ್ತೀನಿ ಅಂದವರು ಒಬ್ಬರು. ಮಾಜಿ ಪ್ರಧಾನಿಯೊಬ್ಬರು ಜಿಲ್ಲೆಯಲ್ಲಿ ರೋಡ್ ಶೋ ಮಾಡಿ ಹೋದರು. ಹೀಗೆ ಪೊಳ್ಳು ಭರವಸೆ ಕೊಟ್ಟು ಹೋದವರು ತುಂಬ ಜನ ಇದ್ದಾರೆ. ಆದರೆ ಒಬ್ಬ ಕಾಂಗ್ರೆಸ್ಸಿನವನಾಗಿ ನಾನು ಹೇಳೋದು ರಾಜೀವ್ ಗಾಂಧಿ ಮತ್ತು ಇಂದಿರಾಗಾಂಧಿ ಆಡಳಿತ ಶ್ಲಾಘನೀಯ. ಬ್ರಿಟೀಷರು ಖಾಲಿ ಮಾಡಿ ಹೋಗಿದ್ದ ಈ ದೇಶದಲ್ಲಿ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್. ಆದರೆ ಇಂದು ಈ ದೇಶದಲ್ಲಿ 114 ಲಕ್ಷ ಕೋಟಿ ರೂ. ಸಾಲವಿದೆ. ಅಚ್ಚೇ ದಿನ್ ತರ್ತೀನಿ ಅಂದು ಧರ್ಮದ ಹೆಸರಲ್ಲಿ ನಮ್ಮಲ್ಲಿ ವಿಷಬೀಜ ಬಿತ್ತುವ ಯತ್ನ ಮಾಡ್ತಿದ್ದಾರೆ. ನಾವೆಲ್ಲರೂ ಒಂದೇ ತಾಯಿ ಮಕ್ಕಳಂತೆ ಇದ್ದೇವೆ. ಆದರೆ ಇಲ್ಲಿಗೆ ಬಂದು ದ್ವೇಷ ಭಾಷಣ ಮಾಡಿದ ಅವರು ಅಲ್ಲೋಲ ಕಲ್ಲೋಲ ಮಾಡಲು ಯತ್ನಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿಗೆ ಬೈಯುತ್ತಿದ್ದವರು ಇವತ್ತು ಅವರ ಜತೆ ಒಂದಾಗಿದ್ದಾರೆ. ನಮ್ಮ ಜನರು ಜಿಲ್ಲೆಯೊಳಗೆ ಕಳ್ಳಕಾಕರು ಪ್ರವೇಶಿಸದಂತೆ ಎಚ್ಚರವಹಿಸಿ. ನಿಮ್ಮ ಮುಂದೆ ಮೊಸಳೆ ಕಣ್ಣೀರು ಇಡುವವರ ವಿರುದ್ಧ ಜಾಗೃತರಾಗಿರಿ ಎಂದರು.
ಸರ್ಕಾರದ ವಿವಿಧ ಇಲಾಖೆಗಳ ಯೋಜನೆಯ ಫಲಾನುಭವಿಗಳಿಗೆ ಹಲವು ಸವಲತ್ತುಗಳನ್ನು ವಿತರಿಸಲಾಯಿತು.
ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಮೇಲುಕೋಟೆ ಕ್ಷೇತ್ರದ ದರ್ಶನ್ ಪುಟ್ಟಣಯ್ಯ, ಮದ್ದೂರಿನ ಶಾಸಕ ಕದಲೂರು ಉದಯ್, ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿಸಿಸಿ ಬ್ಯಾಂಕ್ ಸಿಇಒ ವನಜಾಕ್ಷಿ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.