ಅರಕಲಗೂಡು: ಪಟ್ಟಣ ಸೇರಿದಂತೆ ವಿವಿಧೆಡೆ ವೈಕುಂಠ ಏಕಾದಶಿಯನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು.
ಪಟ್ಟಣದ ಪೇಟೆ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ 6 ನೇ ವರ್ಷದ ವೈಕುಂಕುಂಠ ಏಕಾದಶಿಯನ್ನು ವೈಭವದಿಂದ ನಡಸಲಾಯಿತು. ಸಪ್ತ ದ್ವಾರಗಳ ಮೂಲಕ ತೆರಳಿ ವೈಕುಂಠದ ದ್ವಾರದಲ್ಲಿ ವೆಂಕಟೇಶನ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ತೆರಳಿ ವೈಕುಂಠ ದ್ವಾರದ ಮುಲಕ ದೇವರ ದರ್ಶನ ಪಡೆದು ಧನ್ಯತೆ ಪಡೆದರು.
ಅರೇ ಮಾದನಹಳ್ಳಿ ವಿಶ್ವಕರ್ಮ ಮೂಲ ಮಠದ ಶಿವ ಸುಜ್ಞಾನ ತೀರ್ಥ ಸ್ವಾಮೀಜಿ, ದೊಡ್ಡ ಮಠದ ಮಠಾಧೀಶ ಮಲ್ಲಿ ಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ದೇವಾಲಯ ಸಮಿತಿ ಟ್ರಸ್ಟ್ ಅಧ್ಯಕ್ಷ ಎ.ಜಿ.ರಾಮನಾಥ್, ಮಾಜಿ ಅಧ್ಯಕ್ಷ ಎ.ಆರ್.ಜನಾರ್ಧನ ಗುಪ್ತ, ಕಾರ್ಯದರ್ಶಿ ಪಿ.ಡಿ.ರಾಜೇಂದ್ರಕುಮಾರ್, ಖಜಾಂಚಿ ವಾಸುವಾಂಬ, ಸಹಕಾರ್ಯದರ್ಶಿ ಸಿ.ಎಲ್ ಜಗದೀಶ್, ಕನ್ನಿಕಾ ಮಹಲ್ ಸಮಿತಿ ಅಧ್ಯಕ್ಷ ಎ.ಎಸ್.ವೆಂಕಟೇಶ್ ಶೆಟ್ಟಿ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಪಿ.ಎನ್.ಶಾಂತಕುಮಾರ್ ಇದ್ದರು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು.
ತಾಲೂಕಿನ ಕೊಣನೂರು ವೆಂಕಟರಮಣಸ್ವಾಮಿ ದೇವಸ್ಥಾನ ಹಾಗೂ ಹುಲಿಕಲ್ ಗ್ರಾಮದ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಬೆಳಿಗ್ಗೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ. ವಿಶೇಷ ಪೂಜಾ ಕಾರ್ಯಗಳು ನಡೆದವು. ನಂತರ ರಥ ಬೀದಿಯಲ್ಲಿ ಉತ್ಸವ ನಡೆಸಲಾಯಿತು. ಜನರು ಸಾಲಿನಲ್ಲಿ ನಿಂತು ವೈಕುಂಠ ದ್ವಾರದಲ್ಲಿ ತೆರಳಿ ದೇವರ ದರ್ಶನ ಪಡೆದರು.ಪಟ್ಟಣದ ಕೋಟೆ ಐತಿಹಾಶಕ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಅಭೀಷೇಕ, ಪೂಜಾಕಾರ್ಯಗಳು ನಡೆದವು ರಾತ್ರಿ ಉತ್ಸವ ಪ್ರಸಾದ ವಿನಿಯೋಗ ನಡೆಸಲಾಯಿತು.