ಜಿಲ್ಲೆ

6 ತಿಂಗಳು ಕಾಲಾವಕಾಶ ನೀಡಲು ಆಗ್ರಹ

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ಮೋಟಾರ ವಾಹನ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ 2023 ಜಾರಿಗೊಳಿಸಿದ್ದರಿಂದ ಸರಕು ವಾಹನಗಳ ಮಾಲೀಕರು ಕಷ್ಟಕ್ಕೆ ಸಿಲುಕಿದ್ದಾರೆ. ಏಕಕಾಲಕ್ಕೆ ಪೂರ್ಣಾವಧಿ ತೆರಿಗೆ ಪಾವತಿ ಅಸಾಧ್ಯ. 6 ಕಂತಿನಲ್ಲಿ ಪಾವತಿಸಲು ಸರ್ಕಾರ ಅನುಮತಿ ನೀಡಬೇಕು ಎಂದು ಧಾರವಾಡ ಲಾರಿ ಮಾಲೀಕರ ಹಾಗೂ ಸಾಗಾಣಿಕೆದಾರರ ಸಂಘದ ಅಧ್ಯಕ್ಷ ಐ.ಎಂ. ಜವಳಿ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕು ವಾಹನಗಳ ಒಟ್ಟಾರೆ ತೂಕ 9500 ಕೆಜಿಯಿಂದ 12000 ಕೆಜಿ ಮೀರಿದ ವಾಹನಗಳಿಗೆ ಪೂರ್ಣಾವಧಿ ತೆರಿಗೆ (ಲೈಫ್ ಟ್ಯಾಕ್ಸ್) ವಿಧಿಸಲಾಗಿದೆ. 2 ವರ್ಷದ ವಾಹನಕ್ಕೆ 93000 ರೂ., 3 ವರ್ಷದ ವಾಹನಕ್ಕೆ 89400 ರೂ. ಹೀಗೆ ಒಟ್ಟು 15 ವರ್ಷಗಳ ಅವಧಿಯ ವಾಹನಗಳಿಗೆ ತೆರಿಗೆ ನಿಗದಿ ಮಾಡಲಾಗಿದೆ. ಏಕಕಾಲಕ್ಕೆ ಇಷ್ಟು ಹಣ ತುಂಬುವುದು ಅಸಾಧ್ಯವಾಗಿದ್ದರಿಂದ 6 ತಿಂಗಳ ಕಾಲ ಕಂತಿನಲ್ಲಿ ಸಂದಾಯ ಮಾಡಲು ಅವಕಾಶ ನೀಡಬೇಕು ಎಂದರು.
ಲಾರಿ ಮಾಲೀಕರು ವಾಹನ ಸಾಲದ ಕಂತು ತುಂಬಲು ಸಹ ಆಗದ ಸ್ಥಿತಿ ಇದೆ. ಇಂತಹ ಸಮಯದಲ್ಲಿ ಏಕಕಾಲಕ್ಕೆ ದೊಡ್ಡ ಮೊತ್ತ ಸಂದಾಯ ಅಸಾಧ್ಯ. ಲಾರಿ ಮಾಲಿಕರ ಆರ್ಥಿಕ ಸ್ಥಿತಿ ಅರಿತು ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು ಎಂದರು.
ಕೆಲ ವಾಹನಗಳು ಫಿಟ್‌ನೆಸ್ ಪ್ರಮಾಣಪತ್ರ, ವರ್ಗಾವಣೆ ಮಾಡಬೇಕಿದೆ. ಆದರೆ ಪೂರ್ಣಾವಧಿ ತೆರಿಗೆ ಪಾವತಿಸದಿದ್ದರೆ, ಈ ಪ್ರಕ್ರಿಯೆಗೆ ಅಡ್ಡಿಯಾಗಲಿದೆ. ಹೀಗಾಗಿ ಸರ್ಕಾರ ಪೂರ್ಣಾವಧಿ ತೆರಿಗೆ ವಿಷಯ ಇತ್ಯರ್ಥ ಆಗುವವರೆಗೂ ಫಿಟ್‌ನೆಸ್ ಪ್ರಮಾಣಪತ್ರ, ವರ್ಗಾವಣೆ ಮಾಡಲು ಆರ್‌ಟಿಒ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದರು.
ಸರ್ಕಾರ ಆಗಸ್ಟ ಅಂತ್ಯದೊಳಗೆ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ವಾಹನಗಳ ಸಂಚಾರ ಬಂದ್ ಮಾಡುವುದು ಅನಿವಾರ್ಯ ಆಗಲಿದೆ. ಇದಲ್ಲದೆ ರಾಜ್ಯಾದ್ಯಂತ ಹೋರಾಟ ನಡೆಸಲು ಸಹ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈರಪ್ಪ ಹೂಗಾರ, ಶಬ್ಬೀರ ತಡಕೋಡ, ಸಿದ್ದಲಿಂಗಪ್ಪ ಉಳ್ಳಿಗೇರಿ, ಸದ್ದಾಂ ಖತೀಬ, ಇತರರು ಇದ್ದರು.