ಜಿಲ್ಲೆ

6 ತಿಂಗಳು ಎಚ್ಚರಿಕೆಯಿಂದ ಇರೋಣ

ಮುಂಡಗೋಡ: ಸಾಮಾಜಿಕ ವರದಿ ಸಲ್ಲಿಸುವಲ್ಲಿ ಇಡೀ ಜಿಲ್ಲೆಯಲ್ಲಿ ನಮ್ಮ ತಾಲೂಕು ಪ್ರಥಮ ಸ್ಥಾನದಲ್ಲಿದೆ. ತಾಲೂಕಿನಲ್ಲಿರುವ ಎಲ್ಲ ಇಲಾಖೆಗಳ ಮತ್ತು ಸಮುದಾಯದವರ ಸಹಾಯದಿಂದ ಬರುವ 6 ತಿಂಗಳವರೆಗೆ ಎಚ್ಚರಿಕೆಯಿಂದ ಕೋವಿಡ್-19 ವಿರುದ್ಧ ಹೊರಾಡಬೇಕಿದೆ ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ಹೇಳಿದರು.

ಕೋವಿಡ್-19 ನಿಯಂತ್ರಣ ಕುರಿತು ಪಟ್ಟಣದ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಜರುಗಿದ ವರ್ತಕರ ಮತ್ತು ವಾರ್ಡ್ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಇಲ್ಲಿನ ಕೋವಿಡ್ ಹೆಲ್ತ್​ಕೇರ್ ಸೆಂಟರ್​ನಲ್ಲಿ 13 ಬೆಡ್​ಗಳು, ಐಸೋಲೇಷನ್ ವಾರ್ಡ್​ನಲ್ಲಿ 6 ಬೆಡ್​ಗಳ ವ್ಯವಸ್ಥೆ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು. ಬೇರೆ ಜಿಲ್ಲೆಗಳಿಂದ ಬಂದವರು ನೇರವಾಗಿ ಜ್ವರ ತಪಾಸಣೆ ಕೇಂದ್ರಕ್ಕೆ ಹೋಗಬೇಕು. ಇಲ್ಲದಿದ್ದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ವಿಶೇಷವಾಗಿ ಬೆಂಗಳೂರಿನಿಂದ ಬಂದವರ ಗಂಟಲ ದ್ರವ ಪರೀಕ್ಷಿಸಲಾಗುವುದು ಎಂದರು.

ಆಯಾ ವಾರ್ಡ್ ಸದಸ್ಯರು ತಮ್ಮ ವಾರ್ಡ್​ನಲ್ಲಿ 60 ವರ್ಷ ಮೇಲ್ಪಟ್ಟವರ ಆರೋಗ್ಯ ವರದಿ, 10 ವರ್ಷದೊಳಗಿನ ಮಕ್ಕಳ ಪಟ್ಟಿ ಮಾಡಬೇಕು. ಇದಕ್ಕೆ ಆಶಾ ಕಾರ್ಯಕರ್ತೆಯರ ಸಹಾಯ ಪಡೆದುಕೊಳ್ಳಬೇಕು. ಅಂಗಡಿಕಾರರು ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ, ಪರಸ್ಪರ ಅಂತರ ಕಾಪಾಡಿಕೊಳ್ಳುವಂತೆ ತಿಳಿ ಹೇಳಬೇಕು. ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಅಂಥವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಹಸೀಲ್ದಾರ್ ಹೇಳಿದರು.

ವರ್ತಕ ಉಮೇಶ ರಾಯ್ಕರ ಮಾತನಾಡಿ, ಹೋಟೆಲ್, ಖಾನಾವಳಿ ಮತ್ತು ಬೇಕರಿಗಳನ್ನು ರಾತ್ರಿ 8ರವರೆಗೆ ತೆರೆಯಲು ಅವಕಾಶ ನೀಡಬೇಕು ಎಂದು ಕೋರಿದರು. ಆದರೆ, ಕೆಲವರು ಮಧ್ಯಾಹ್ನ 2ರವರೆಗೆ ಮಾತ್ರ ಅಂಗಡಿ ತೆರೆಯಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಭಟ್ಟ ಮಾತನಾಡಿ, ಇನ್ನೂ 12 ದಿನ ಲಾಕ್​ಡೌನ್ ಮಾಡಬೇಕು ಎಂದರು. ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯ, ಎಸ್.ವೈ. ಗೋಣೆಪ್ಪನವರ, ಪ.ಪಂ. ಸದಸ್ಯರು, ವರ್ತಕರು ಇದ್ದರು.

ತಾಲೂಕು ಆಸ್ಪತ್ರೆ ಸಿಬ್ಬಂದಿಗೆ ಮನೆ ಬಾಡಿಗೆ ನೀಡಿರುವ ಮಾಲೀಕರು, ನಮ್ಮ ಮನೆಯಲ್ಲಿ ವೃದ್ಧರು, ಮಕ್ಕಳು ಇದ್ದಾರೆ. ನಿಮ್ಮಿಂದಾಗಿ ನಮಗೆ ಕರೊನಾ ಸೋಂಕು ತಗಲುವ ಭೀತಿ ಇದೆ. ಹೀಗಾಗಿ ಮನೆ ಬಿಟ್ಟು ಹೋಗಿ ಎಂದು ಹೇಳುತ್ತಿದ್ದಾರೆ. ಇದರಿಂದ ನಮ್ಮ ಸಿಬ್ಬಂದಿ ಬೇಸರಗೊಂಡಿದ್ದಾರೆ. | ಎಚ್.ಎಫ್. ಇಂಗಳೆ ತಾಲೂಕು ಆಡಳಿತ ವೈದ್ಯಾಧಿಕಾರಿ