ಜಿಲ್ಲೆ

ಬನ್ನೇರುಘಟ್ಟದಲ್ಲಿ 6 ಹುಲಿಮರಿಗಳ ಜನನ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇತ್ತೀಚೆಗೆ 6 ವರ್ಷದ ಹುಲಿ ಹಿಮಾ ನಾಲ್ಕು ಮರಿಗಳಿಗೆ, 8 ವರ್ಷದ ಅರುಣ್ಯ 2 ಮರಿಗಳಿಗೆ ಜನ್ಮ ನೀಡಿವೆ. ಹಿಮಾ 2024ರ ಜೂನ್‌ನಲ್ಲಿ ಮೊದಲ ಬಾರಿಗೆ ಎರಡು ಮರಿಗೆ ಜನ್ಮ ನೀಡಿತ್ತು. ಇನ್ನು ಎರಡು ಮರಿಗಳಿಗೆ ಜನ್ಮನೀಡಿರುವ ಅರುಣ್ಯ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ತಮಿಳುನಾಡಿನ ಚೆನ್ನೈನ ಅರಿಗ್ನಾರ್ ಅನ್ನಾ ಜೂಲಾಜಿಕಲ್ ಪಾರ್ಕ್‌ನಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿದ್ದು, ಬಿಳಿ ಹುಲಿ ವೀರ್ ಜತೆಗೂಡಿಸಲಾಗಿತ್ತು. ಈಗ ಮೊದಲ ಬಾರಿಗೆಯೇ ಎರಡು ಮರಿಗಳಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.

ಹಾಲುಣಿಸದ ಹಿಮಾ

ಸಫಾರಿಯಲ್ಲಿರುವ ಅರಣ್ಯ ತನ್ನ ಎರಡೂ ಮರಿಗಳಿಗೆ ಹಾಲುಣಿಸುತ್ತಿದೆ. ಆದರೆ ಹಿಮಾ ಮಾತ್ರ ಮರಿಗಳಿಗೆ ಜನ್ಮನೀಡಿದ ಆರಂಭದಲ್ಲಿ ಹೊರತು ಪಡಿಸಿ, ಬಳಿಕ ಮರಿಗಳಿಗೆ ಹಾಲುಣಿಸದೆ ದೂರವಾಗಿದೆ. ಹಾಗಾಗಿ ಮರಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದ್ದು, ಪ್ರತಿದಿನ ಬೆಳಗ್ಗೆಯಿಂದ ರಾತ್ರಿವರೆಗೆ ಮೇಕೆ ಹಾಲು ನೀಡಲಾಗುತ್ತಿದೆ. ಹುಲಿ ಮರಿಗಳ ಆರೈಕೆಗಾಗಿ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸಲಾಗಿದೆ. ನಾಲ್ಕು ಮರಿಗಳನ್ನು ಪ್ರತ್ಯೇಕವಾಗಿಟ್ಟು ಆರೈಕೆ ಮಾಡಲಾಗುತ್ತಿದೆ.

ಶ್ಯಾಡೋ ಚಿರತೆ ಸಾವು:  ಬನ್ನೇರುಘಟ್ಟ ಜೈವಿಕ ಉದ್ಯಾನವನದ ರೆಸ್ಕ್ಯೂ ಸೆಂಟರ್‌ನಲ್ಲಿದ್ದ ಶ್ಯಾಡೋ ಹೆಸರಿನ

ಹೆಣ್ಣು ಚಿರತೆ ಇತ್ತೀಚೆಗೆ ಮೃತಪಟ್ಟಿದೆ.

ಬಂಡೀಪುರ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ ಚಿರತೆ ಮರಿ 2011ರಲ್ಲಿ ಮೈಸೂರು ಮಹಾರಾಜರ ಕುಟುಂಬದ ಕಣ್ಣಿಗೆ ಬಿದ್ದಿತ್ತು. ಬಳಿಕ ಚಿರತೆ ಮರಿಯನ್ನು ರಕ್ಷಿಸಿ, ಶ್ಯಾಡೋ ಎಂದು ನಾಮಕರಣ ಮಾಡಿ, ಮೈಸೂರು ಮೃಗಾಲಯಕ್ಕೆ ಹಸ್ತಾಂತರಿಸಲಾಗಿತ್ತು. ನಂತರದ ದಿನಗಳಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕಳುಹಿಸಲಾಗಿತ್ತು. ಆರೋಗ್ಯವಾಗಿಯೇ ಇದ್ದ ಚಿರತೆ ದಿಢೀರ್ ಮೃತಪಟ್ಟಿದ್ದು,

ಸಾವಿಗೆ ಕಾರಣ ತಿಳಿದುಬಂದಿಲ್ಲ.

ಭಿನ್ನಾಭಿಪ್ರಾಯದಿಂದ ಸಮಸ್ಯೆ: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅನನುಭವಿ ವೈದ್ಯರು ಮತ್ತು ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯಯವೇ ಪ್ರಾಣಿಗಳ ಸಾವಿಗೆ ಕಾರಣ ಎಂದು ಪ್ರಾಣಿ ಪ್ರಿಯರು ಆರೋಪಿಸಿದ್ದಾರೆ. ಜೈವಿಕ ಉದ್ಯಾನವನದಲ್ಲಿ ವರ್ಷಕ್ಕೆ 50 ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹವಾಗುತ್ತಿದೆ. ಆದರೆ, ಪ್ರಾಣಿಗಳ ಪಾಲನೆ ಪೋಷಣೆಗಿರುವುದು ಒಬ್ಬ ವೈದ್ಯ ಮಾತ್ರ. ನುರಿತ ವೈದ್ಯರ ಜತೆಗೆ ಇಬ್ಬರು ಆರ್‌ಎ್ಒ ಮತ್ತು ಡೆಪ್ಯುಟಿ ಡೈರೆಕ್ಟರ್ ಹುದ್ದೆ ಖಾಲಿ ಇದೆ ಎನ್ನಲಾಗಿದೆ. ಅಂತೆಯೇ, 2 ಸಾವಿರಕ್ಕೂ ಅಧಿಕ ಪ್ರಾಣಿಗಳಿರುವ ಉದ್ಯಾನವನದಲ್ಲಿ ವರ್ಷಕ್ಕೆ ನೂರಕ್ಕೂ ಅಧಿಕ ಪ್ರಾಣಿಗಳು ಸಾಯುವುದು ಸಾಮಾನ್ಯ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಸಮರ್ಥಿಸಿಕೊಂಡಿದ್ದಾರೆ.