ಕಕ್ಕೇರಿ: ಬೆಂಗಳೂರು, ಗೋವಾದಿಂದ ಸ್ವ ಗ್ರಾಮ ಕಕ್ಕೇರಿಗೆ ಆಗಮಿಸಿದ 6 ಜನರಿಗೆ 14 ದಿನ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಎಂ. ಬೊಂಗಾಳೆ ಹೇಳಿದರು.
ಗ್ರಾಮಕ್ಕೆ ಆಗಮಿಸಿದವರ ಮನೆಗಳಿಗೆ ಗ್ರಾಪಂ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಗುರುವಾರ ಭೇಟಿ ನೀಡಿ, ನಂತರ ಅವರು ಮಾತನಾಡಿದರು. ಕರೊನಾ ವೈರಸ್ ತಡೆಯಲು ಸರ್ಕಾರ ಹಲವು ನಿಯಗಳನ್ನು ಜಾರಿಗೆ ತಂದಿದೆ.
ಅವುಗಳನ್ನು ಪಾಲಿಸುವಂತೆ ಹೊರ ಜಿಲ್ಲೆ, ರಾಜ್ಯದಿಂದ ಗ್ರಾಮಕ್ಕೆ ಬಂದವರಿಗೆ ತಿಳಿಸಲಾಗಿದೆ. ಆರು ಜನರಲ್ಲಿಯೂ ಕರೊನಾ ವೈರಸ್‌ನ ಲಕ್ಷಣಗಳು ಕಂಡು ಬಂದಿಲ್ಲ ಎಂದು ಅವರು ತಿಳಿಸಿದರು.
ಆರೋಗ್ಯ ಸಹಾಯಕಿ ವಿಜಯಲಕ್ಷ್ಮೀ ತಿಗಡೊಳ್ಳಿ ಮಾತನಾಡಿ, ಗ್ರಾಮ ಹಾಗೂ ಮನೆಯ ಸುತ್ತಲಿನ ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಸುತ್ತಾಡುವುದು, ಅಂಗಡಿಗಳ ಎದುರು ಖರೀದಿಗೆ ಹೋದಾಗ ಪರಸ್ಪರ ಅಂತರ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಕೆಮ್ಮು, ನೆಗಡಿ, ಜ್ವರದಂತಹ ಲಕ್ಷಣ ಕಂಡುಬಂದಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆ ಶಿವಲೀಲಾ ಪತ್ರಿಮಠ, ಪೊಲೀಸ್ ಪೇದೆ ಬಿ.ಐ. ಕೋಣಿನವರ ಮಾತನಾಡಿ, ಕರೊನಾ ವೈರಸ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿದರು. ಗ್ರಾಮ ಪಂಚಾಯಿತಿ ನೌಕರ ಬಸವರಾಜ ಅಂಬಡಗಟ್ಟಿ, ಮುಖಂಡರಾದ ಇಲಿಯಾಸ್ ಮುಲ್ಲಾ, ಆಜಾದ್ ಸೌದಾಗರ, ಮಲ್ಲಿಕಾರ್ಜುನ ಕುಕಡೊಳ್ಳಿ, ಪ್ರಕಾಶ ಶಿರಗಾಪುರ, ಶಾನೂರ್ ತಳವಾರ, ಕಲ್ಲಪ್ಪ ಹುಬ್ಬಳ್ಳಿ ಇತರರು ಉಪಸ್ಥಿತರಿದ್ದರು.