ನರಗುಂದ: ಪಟ್ಟಣದ ಬನಹಟ್ಟಿ ರಸ್ತೆ ಹೊರವಲಯದ ಆನಂದ ಭೋಸಲೆಯವರ ತೋಟದ ಶೆಡ್ಡಿನಲ್ಲಿ ಸಂಗ್ರಹಿಸಿಟ್ಟಿದ್ದ ಮೆಕ್ಕೆ ಜೋಳದ ಮೇವಿನ ರಾಶಿಯಲ್ಲಿ ಆಶ್ರಯ ಪಡೆದಿದ್ದ 6 ಅಡಿ ಉದ್ದದ ಕೊಳಕು ಮಂಡಳ ಹಾವನ್ನು ಉರಗ ತಜ್ಞ ಮಂಜುನಾಥ ನಾಯಕ್ ಮಂಗಳವಾರ ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟರು.
ಭಾರತದ ನಾಲ್ಕು ಅತ್ಯಂತ ವಿಷಯುಕ್ತ ಹಾವುಗಳ ಪೈಕಿ ಕೊಳಕು ಮಂಡಲವು ಒಂದು. ಇದು ವಿಷಪೂರಿತ ಹಾವಾಗಿದ್ದು ಇದನ್ನು ಬೇರೆ ಬೇರೆ ಭಾಗಗಳಲ್ಲಿ ಕನ್ನಡಿ ಹಾವು, ದಾಸರ ಹಾವು, ಮಂಡಲದ ಹಾವು (ರಸೆಲ್ಸ್ ವೈಫರ್) ಎಂದು ಕರೆಯಲಾಗುತ್ತದೆ.
ಇದರ ವಿಷದ ಹಲ್ಲುಗಳು ಸೂಜಿಯಂತೆ ಬಲು ಉದ್ದ ಹಾಗೂ ತೀಕ್ಷ್ಣವಾಗಿದ್ದು, ಚುಚ್ಚುಮದ್ದಿನ ಸೂಜಿಯಂತೆ ಒಳಗೆ ಕೊಳವೆಯಿಂದ ಕೂಡಿವೆ. ಬಾಯಿಯ ಹಿಂಬಾಗದ ಎರಡೂ ಪಾರ್ಶ್ವಗಳಲ್ಲಿರುವ ವಿಷಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ವಿಷ ಈ ಕೊಳವೆಗಳ ಮೂಲಕ ಹರಿದು ಬರುತ್ತದೆ. ಕೆಲವೊಮ್ಮೆ ಹಾವು ಬಾಯಿ ತೆರೆದ ತಕ್ಷಣ ವಿಷ ಚಿಮ್ಮುವುದು ಉಂಟು. ಇದರ ವಿಷಕ್ಕೆ ರಕ್ತ ಹೆಪ್ಪುಗಟ್ಟಿಸುವ ಶಕ್ತಿ ಇರುತ್ತದೆ. ಈ ಹಾವು ಕಡಿದ ಭಾಗದಲ್ಲಿ ವಿಪರೀತ ಬಾತುಕೊಂಡು ಉರಿ ಉಂಟಾಗುತ್ತದೆ. ಶೀಘ್ರವೇ ಚಿಕಿತ್ಸೆ ಪಡೆಯದಿದ್ದರೆ ಇದರ ವಿಷವು ಕಿಡ್ನಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.
ರೈತರು ಹೊಟ್ಟು-ಮೇವಿನ ರಾಶಿ, ಜಮೀನುಗಳಲ್ಲಿ ಕೆಲಸ ಮಾಡುವಾಗ ಬಹಳಷ್ಟು ಜಾಗೃತಿ ಹೊಂದಿರಬೇಕು. ಈಗ ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದು, ಹಾವುಗಳು ತಂಪು ಪ್ರದೇಶಗಳಾದ ನೀರಿನ ಸಂಪುಗಳ ಸಂದುಗಳನ್ನು ಹುಡುಕಿಕೊಂಡು ಆಶ್ರಯ ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸಾರ್ವಜನಿಕರು ತಮ್ಮ ಮನೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಆಗಾಗ ಸ್ವಚ್ಛತೆ ಕಾಪಾಡಿಕೊಂಡು ವಿಷ ಜಂತುಗಳು ಬರದ ಹಾಗೆ ನಿಗಾವಹಿಸಬೇಕು ಎಂದು ಉರುಗ ತಜ್ಞ ಮಂಜುನಾಥ ನಾಯಕ್ ತಿಳಿಸಿದರು.