ಬೆಂಗಳೂರು: ಹೊರ ರಾಜ್ಯದಿಂದ ಮಾದಕ ವಸ್ತು ತಂದು ಮಾರಾಟಕ್ಕೆ ಯತ್ನಿಸಿದ್ದ ಆರು ಮಂದಿ ಡ್ರಗ್ ಪೆಡ್ಲರ್ಗಳನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಉತ್ತರ ವಿಭಾಗ ಮತ್ತು ಪಶ್ಚಿಮ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ರಶಾದ್ನಗರ ನಿವಾಸಿ ಮಹಮದ್ ಸಲೀಂ (26) ಮೈಸೂರು ಮೂಲದ ಸೈಯದ್ ತಂಜಿಮ್ (32) ಮತ್ತು ಮಹಮದ್ ಶಿಬಾನ್ (21), ಕೋಣನಕುಂಟೆ ಪುರುಷೋತ್ತಮ್ (38), ಅಂಜನಾಪುರದ ಜಯಮಲ್ಲು (23), ಉತ್ತರಹಳ್ಳಿಯ ಧನುಷ್ (21) ಬಂಧಿತರು. ಆರೋಪಿಗಳಿಂದ 2.ಕೆ.ಜಿ ಚೆರಸ್, 1.5 ಕೆ.ಜಿ ಗಾಂಜಾ ಹಾಗೂ ಓಮ್ನಿ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಮದ್ ಸಲೀಂ ಮತ್ತು ಆತನ ಸಹಚರರು ಜೆ.ಪಿ.ಪಾರ್ಕ್ ಬಳಿ ಓಮ್ನಿ ವಾಹನದಲ್ಲಿ ಗಾಮಜಾ ಮತ್ತು ಚೆರಸ್ ಮಾರಾಟಕ್ಕೆ ಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ತಮಿಳುನಾಡಿನ ಊಟಿಯಲ್ಲಿ ಚೆರೆಸ್ ಖರೀದಿಸಿ ತಂದಿದ್ದರು. ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆಯಲ್ಲಿ ತೊಡಗಿದ್ದರು. ಚೆರೆಸ್ ಒದಗಿಸುತ್ತಿದ್ದ ತಮಿಳುನಾಡಿನ ರೆಹಮಾನ್ ಎಂಬುವನು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಯಶವಂತಪುರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಜ್ಞಾನಭಾರತಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಹಾಗೂ ಸಿಟಿ ಮಾರ್ಕೆಟ್ನಲ್ಲಿ ಗಾಂಜಾ ಮಾರಾಟಕ್ಕೆ ಬಂದಿದ್ದ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ, 1.4 ಕೆ.ಜಿ ಗಾಂಜಾ ಜಪ್ತಿ ಮಾಡಿ ವಿಚಾರಣೆಗೊಳಪಡಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ. ಪಾಟೀಲ್ ತಿಳಿಸಿದ್ದಾರೆ.