ಜಿಲ್ಲೆ

ಮಂಗಳಾದೇವಿಯಲ್ಲಿ 6.98 ಕೋಟಿ ರೂ. ಕಾಮಗಾರಿಗೆ ಶಂಕುಸ್ಥಾಪನೆ

ಮಂಗಳೂರು: ನಗರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿವೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ಬುಧವಾರ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳದೇವಿ ವಾರ್ಡ್‌ನಲ್ಲಿ ಮಂಗಳಾದೇವಿ ಬಸ್ ಟರ್ಮಿನಲ್, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯ ಮತ್ತು ನಗರ ಪಾಲಿಕೆ ಸಿಬ್ಬಂದಿಗೆ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ನಗರವಾಗಿರುವ ಮಂಗಳೂರಿನ ಅಭಿವೃದ್ಧಿಗೆ ಸರ್ಕಾರಗಳು ಬದ್ದವಾಗಿವೆ, ಈ ದಿಸೆಯಲ್ಲಿ ನಗರಕ್ಕೆ ಅಗತ್ಯವಿರುವ ಸಾಕಷ್ಟು ಕಾಮಗಾರಿ ಕೈಗೊಂಡು ಅನುಷ್ಠಾನ ಮಾಡಲಾಗುತ್ತಿದೆ. ಮಂಗಳಾದೇವಿ ದೇವಸ್ಥಾನದ ಮುಖ್ಯರಸ್ತೆ ಬದಿಯಲ್ಲಿ ಬಸ್‌ಗಳು ನಿಲ್ಲುವುದರಿಂದ ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ನಗರಪಾಲಿಕೆ ಸಿಬ್ಬಂದಿ ವಸತಿಗೃಹ ಹಳೆಯದಾಗಿದ್ದು ವಾಸಿಸಲು ಕಷ್ಟವಾಗುತ್ತದೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ವೈದ್ಯ ಚಿಕಿತ್ಸಾಲಯಗಳಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಆದ್ದರಿಂದ 4 ಕೋಟಿ 98 ಲಕ್ಷ ರೂ.ವೆಚ್ಚದಲ್ಲಿ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯ ಮತ್ತು ಬಸ್ ಟರ್ಮಿನಲ್ ಹಾಗೂ 2 ಕೋಟಿ ರೂ. ವೆಚ್ಚದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.