ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 6.83 ಲಕ್ಷ ಪಿಎಂ ಜನ್ಧನ್ ಖಾತೆ ತೆರೆದಿದ್ದು, ಮಹಿಳೆಯರಲ್ಲಿಯೇ ಹೆಚ್ಚು ಆರ್ಥಿಕ ಸಾಕ್ಷರತೆ ಮೂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಜನ್ಧನ್ ಯೋಜನೆಯಡಿ ಕಳೆದೊಂದು ದಶಕದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 6,83,250 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳಲ್ಲಿ ಒಟ್ಟು 464.54 ಕೋಟಿ ರೂ. ಜಮೆಯಾಗಿದೆ ಎಂದು ತಿಳಿಸಿದ್ದಾರೆ.
ಧಾರವಾಡ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ 27,4669 ಜನ್ ಧನ್ಖಾತೆ ತೆರೆದಿದ್ದರೆ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ 3,92,327 ಖಾತೆಗಳನ್ನು ತೆರೆಯಲಾಗಿದೆ. ಇದರಲ್ಲಿ ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಆರ್ಥಿಕ ಸಾಕ್ಷರತೆ, ಸ್ಥಿರತೆ, ಆರ್ಥಿಕ ಭದ್ರತೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಧಾರವಾಡ ಕ್ಷೇತ್ರದಲ್ಲಿ 2,73,354 ಪುರುಷರು ಜನ್ಧನ್ ಖಾತೆ ತೆರೆದಿದ್ದರೆ, 4,09,869 ಮಹಿಳೆಯರು ಜನ್ಧನ್ ಖಾತೆ ತೆರೆದು ಈ ಯೋಜನೆಯಲ್ಲಿ ಮುಂದಿದ್ದಾರೆ.
4.5 ಲಕ್ಷ ರುಪೇ ಕಾರ್ಡ್: ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ಖಾತೆ ತೆರೆದವರಲ್ಲಿ 4,52,099 ಗ್ರಾಹಕರಿಗೆ ರುಪೇ ಕಾರ್ಡ್ ಸಹ ಒದಗಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ