ದಾವಣಗೆರೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವಿವಿಧ ಘಟಕಗಳ ಪದಗ್ರಹಣ ಸಮಾರಂಭ ಜ. 5ರಂದು ಬೆಳಗ್ಗೆ 11 ಗಂಟೆಗೆ ನಗರದ ರೇಣುಕಾ ಮಂದಿರದಲ್ಲಿ ನಡೆಯಲಿದೆ.
ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದಿನ ಕಾರ್ಯಕ್ರಮದ ಸಾನ್ನಿಧ್ಯವನ್ನು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ವಹಿಸುವರು ಎಂದು ತಿಳಿಸಿದರು.
ಒಟ್ಟು 7 ಘಟಕಗಳ ಪದಗ್ರಹಣ ನಡೆಯಲಿದೆ. ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಸ್ವಾಮೀಜಿ ಅವರೇ ಪ್ರಮಾಣವಚನ ಬೋಧಿಸುವರು. ನಂತರ ಜಿಲ್ಲಾ ಯುವ ಘಟಕ, ಜಿಲ್ಲಾ ನೌಕರರ ಘಟಕ, ದಾವಣಗೆರೆ ನಗರ ಘಟಕ, ನಗರ ಯುವ ಘಟಕ, ನಗರ ನೌಕರರ ಘಟಕ, ದಾವಣಗೆರೆ ಗ್ರಾಮಾಂತರ ಘಟಕಗಳ ಪದಾಧಿಕಾರಿಗಳ ಪದಗ್ರಹಣ ನೆರವೇರಲಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆಗೆ ನೂತನ ಸದಸ್ಯರಾಗಿ ಆಯ್ಕೆಯಾದ ಅಜಯ ಕುಮಾರ್ ಬಿ.ಜಿ, ಕೆ.ಎಂ. ವೀರೇಶ್, ಸೋಗಿ ಶಾಂತಕುಮಾರ್ ಅವರನ್ನು ಅಭಿನಂದಿಸಲಾಗುವುದು. ಲಿಟ್ಲ್ ಚಾಂಪ್ಸ್ ಗುರುಕುಲ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಪೃಥ್ವಿರಾಜ್ ಬಾದಾಮಿ ಉಪನ್ಯಾಸ ನೀಡುವರು. ಜ. 14, 15ರಂದು ನಡೆಯುವ ಹರ ಜಾತ್ರೆ ಮತ್ತು ಸಂಘದ 25ನೇ ವರ್ಷಾಚರಣೆ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
‘ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಹರ ಜಾತ್ರೆಗೆ ಬರುವಂತೆ ಆಹ್ವಾನ ನೀಡಲಾಯಿತು. ಆದರೆ ಜ. 14, 15ರಂದು ಅವರಿಗೆ ಪೂರ್ವನಿಗದಿತ ಕಾರ್ಯಕ್ರಮಗಳಿರುವುದರಿಂದ ಮುಂದಿನ ದಿನಗಳಲ್ಲಿ ಅವರು ದಿನಾಂಕವನ್ನು ನೀಡುವ ಸಾಧ್ಯತೆಯಿದೆ ಎಂದರು.
ಸಮಾಜದ ಮುಖಂಡರಾದ ಬಾದಾಮಿ ಕರಿಬಸಪ್ಪ, ಎಂ. ದೊಡ್ಡಪ್ಪ, ಸ.ಚ. ಕಾಶೀನಾಥ, ಮಂಜುನಾಥ ಪುರವಂತರ್, ಮಲ್ಲಿನಾಥ್, ಚನ್ನಬಸಪ್ಪ, ಲಿಂಗರಾಜ್, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.