ಜಿಲ್ಲೆ

5ರಂದು ಮೇಲುಕೋಟೆಯಲ್ಲಿ ಜಂಬೂ ಸವಾರಿ

Mandya

ಮೇಲುಕೋಟೆ: ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿಗೆ ಅ.5(ವಿಜಯದಶಮಿ) ರಂದು ರಾತ್ರಿ ಜಂಬೂಸವಾರಿ ಉತ್ಸವ ವೈಭವದಿಂದ ನೆರವೇರಲಿದೆ.

ಮೂಲಮೂರ್ತಿಗೆ ಬೆಳಗಿನಿಂದಲೇ ರಾಜಾಲಂಕಾರದ ವೈಭವ ನೆರವೇರಲಿದೆ. ವೇದಾಂತ ದೇಶಿಕರ ಜಯಂತ್ಯುತ್ಸವದ ಕಾರ್ಯಕ್ರಮಗಳು ನಡೆದ ನಂತರ ರಾತ್ರಿ ಕುದುರೆ ವಾಹನೋತ್ಸವ ಮತ್ತು ಬನ್ನಿಪೂಜೆ ನೆರವೇರಲಿದೆ.

ಬೀದಿ ದೀಪ ಅಳವಡಿಕೆ: ರಾತ್ರಿ ವೇಳೆ ಉತ್ಸವ ಬೀದಿಯುದ್ದಕ್ಕೂ ನಡೆಯುವುದರಿದ ಫೋಕಸ್ ಲೈಟ್‌ಗಳನ್ನು ಅಳವಡಿಸಲು ಗ್ರಾಮ ಪಂಚಾಯಿತಿ ಕ್ರಮವಹಿಸಿದೆ. 50 ಅಡಿಗೆ ಒಂದರಂತೆ ದೀಪಗಳನ್ನು ಅಳವಡಿಸಲಾಗುತ್ತಿದೆ ಎಂದು ಗ್ರಾಪಂ ಉಪಾಧ್ಯಕ್ಷ ವಾದ್ಯಾರ್ ತಿರುಮಲೈ ತಿಳಿಸಿದ್ದಾರೆ.

ವಿಜಯದಶಮಿಯಂದು ರಾಜಾಲಂಕಾರದಲ್ಲಿ ಕಂಗೊಳಿಸುವ ಚೆಲುವನಾರಾಯಣಸ್ವಾಮಿ ಕುದುರೆಯೇರಿ ಬನ್ನಿ ಮಂಟಪಕ್ಕೆ ತೆರಳುತ್ತಾನೆ. ಅಲ್ಲಿ ದಶದಿಕ್ಕುಗಳಿಗೆ ಬಾಣ ಪ್ರಯೋಗ ಮಾಡಿ ಲೋಕ ಕಲ್ಯಾಣಾರ್ಥವಾಗಿ ಬನ್ನಿಪೂಜೆ ಮಾಡಲಾಗುತ್ತದೆ. ಚೆಲುವನಾರಾಯಣ ಕುದುರೆ ವಾಹನೋತ್ಸವದಲ್ಲಿ ಮರಳಿ ಪಟ್ಟಣಕ್ಕೆ ಬಂದಾಗ ಮಹಾಲಕ್ಷ್ಮೀ ಕಲ್ಯಾಣ ನಾಯಕಿ ಅಮ್ಮನವರು ದೊಡ್ಡ ಶೇಷ ವಾಹನದಲ್ಲಿ ಸ್ವಾಗತಿಸುತ್ತಾಳೆ. ನಂತರ ದೇವ-ದೇವಿಯರ ಎದುರು ಉತ್ಸವ ನೆರವೇರುತ್ತದೆ. ಇಡೀ ದಿನ ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗಾನರಸಿಂಹನಿಗೆ ರಾಜಾಲಂಕಾರ ಮಾಡಲಾಗುತ್ತದೆ ಎಂದು ಗ್ರಾಪಂ ಉಪಾಧ್ಯಕ್ಷ ಎನ್.ತಿರುಮಲೈ ತಿಳಿಸಿದರು.