ಜಿಲ್ಲೆ

5ರಂದು ದಿ ಡಾರ್ಕ್ ವೆಬ್ ಸಿನಿಮಾ ತೆರೆಗೆ

ಹಾಸನ: ಪತ್ರಕರ್ತರೇ ನಟಿಸಿ, ನಿರ್ಮಿಸಿರುವ ‘ದಿ ಡಾರ್ಕ್ ವೆಬ್’ ಸಿನಿಮಾ ಏ. 5ರಂದು ನಗರದ ಪೃಥ್ವಿ ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಮಂಜು ಬನವಾಸೆ ಅವರು ತಿಳಿಸಿದರು.
ಸಿನಿಮಾ ಶುಕ್ರವಾರ ಬೆಳಿಗ್ಗೆ 10.30 ಹಾಗು ಮಧ್ಯಾಹ್ನ 1.30ಕ್ಕೆ ಎರಡು ಪ್ರದರ್ಶನ ಕಾಣಲಿದೆ. ಸೈಬರ್ ಕ್ರೈಮ್‌ಗಳ ಕಥಾ ಹಂದರವನ್ನು ಆಧರಿಸಿ ಮಾಡಿರುವ ಸಿನಿಮಾ ಇದಾಗಿದೆ. ನಾವು ಸುದ್ದಿಯಾಗಿ ಏನನ್ನು ನೋಡುತ್ತೇವೆಯೋ ಅದನ್ನೇ ಕಥೆಯಾಗಿ ತೆರೆ ಮೇಲೆ ತಂದಿದ್ದೇವೆ. ಬಹತೇಕ ಚಿತ್ರೀಕರಣ ಹಾಸನದಲ್ಲೇ ನಡೆದಿದೆ. ಪತ್ರಕರ್ತರೇ ಪಾತ್ರಧಾರಿಗಳಾಗಿರುವ ಸಿನಿಮಾ ಇದಾಗಿದೆ. ಕಿರಣ್ ಸ್ವಾಮಿ ಸಿನಿಮಾ ಆಕ್ಷನ್ ಕಟ್ ಹೇಳಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬ್ಯಾಂಕ್ ಅಕೌಂಟ್‌ನಿಂದ ಹಣ ಹೋಗುವುದು, ರಾಜಕಾರಣಿಗಳು ಮಾಡುವ ಅನಾಚಾರ ಈ ರೀತಿಯ ಎಳೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ದಾರಕ್ಕೆ ಮಣಿ ಪೋಣಿಸಿದಂತೆ ಕಥೆ ಜೋಡಿಸಲಾಗಿದೆ. ನಾವು ಈ ಸಿನಿಮಾಗೆ ಹೆಚ್ಚು ಹಣ ಹೂಡಿಕೆ ಮಾಡಿಲ್ಲ. ಇಂತಹ ಒಂದು ಸಿನಿಮಾ ಮಾಡಬೇಕು ಎಂಬ ಕನಸು ಕಾಲೇಜು ದಿನಗಳಲ್ಲೇ ಇತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಕಿರಣ್ ಸ್ವಾಮಿ, ನಟ ಚೇತನ್, ನಾಯಕ ನಟಿ ಮೇಘನಾ, ಸಹ ನಟರಾದ ನಾಗರಾಜು, ಬಿ.ಆರ್.ಬೊಮ್ಮೇಗೌಡ, ಮಂಜೇಗೌಡ, ನಿರ್ಮಾಪಕ ಹೆತ್ತೂರು ನಾಗರಾಜ್ ಇತರರಿದ್ದರು.