ಚಿಕ್ಕಮಗಳೂರು: ನ್ಯಾಯಬೆಲೆ ಅಂಗಡಿಗಳಿಗೆ ಈ ಹಿಂದಿನ ಪದ್ಧತಿಯಂತೆ ಪ್ರತಿ ತಿಂಗಳು ಐದನೇ ತಾರೀಖಿನ ಒಳಗಾಗಿ ಪಡಿತರ ಹಂಚಿಕೆ ಮಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ತಿಂಗಳು 15ನೇ ತಾರೀಖಿನ ಬಳಿಕ ಪಡಿತರ ನೀಡಲಾಗುತ್ತಿದೆ. ಇದರಿಂದಾಗಿ ನ್ಯಾಯಬೆಲೆ ಅಂಗಡಿಗಳ ಎದುರು ಪಡಿತರ ಚೀಟಿದಾರರು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಂಗಳು ಕಳೆಯುವ ಒಳಗಾಗಿ ಪಡಿತರ ವಿತರಣೆ ಮಾಡಬೇಕಿದೆ. ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಬರುವುದು ವಿಳಂಬವಾಗುವ ಹಿನ್ನೆಲೆಯಲ್ಲಿ ರಾಜ್ಯದ 20 ಸಾವಿರ ನ್ಯಾಯಬೆಲೆ ಅಂಗಡಿ ಮಾಲೀಕರು ಒಂದೇ ಅವಧಿಗೆ ಪಡಿತರ ವಿತರಣೆ ಆರಂಭಿಸುವುದರಿಂದ ಸರ್ವರ್ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಿದರು.
ಆಹಾರ ಭದ್ರತೆ ಯೋಜನೆ ಅಡಿ ಕೇಂದ್ರ ಸರ್ಕಾರ ಐದು ಕೆಜಿ ಹಾಗೂ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿ 5 ಕೆಜಿ ಅಕ್ಕಿ ನೀಡುತ್ತಿದೆ. ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿಯ ಹಣವನ್ನು ಕೇಂದ್ರ ಸರ್ಕಾರಕ್ಕೆ ಕಟ್ಟಿದರೆ ಮಾತ್ರ ಅಕ್ಕಿ ಬಿಡುಗಡೆಯಾಗುತ್ತದೆ. ರಾಜ್ಯ ಸರ್ಕಾರ ನಿಗದಿತ ಅವಧಿ ಒಳಗೆ ಕೇಂದ್ರಕ್ಕೆ ಹಣವನ್ನು ಪಾವತಿಸದಿರುವ ಕಾರಣದಿಂದಾಗಿ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ವಿತರಣೆಯಾಗುವುದು ವಿಳಂಬವಾಗುತ್ತಿದೆ ಎಂದರು.
ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬರಬೇಕಾದ ಕಮಿಷನ್ ಹಣವನ್ನು ಆಯಾ ತಿಂಗಳಲ್ಲೇ ಪಾವತಿ ಮಾಡಬೇಕು. ಹಲವು ವರ್ಷಗಳಿಂದ ಇಕೆವೈಸಿ ಮಾಡಿರುವ ಹಣವು ಸಹ ಇದುವರೆಗೆ ಬಂದಿಲ್ಲ. ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು. ಪ್ರಸ್ತುತ ನ್ಯಾಯಬೆಲೆ ಅಂಗಡಿಗಳಿಗೆ ಬಿಲ್ಲಿಂಗ್ ಮಾಡಿದ 24 ಗಂಟೆಗಳ ನಂತರ ಬಿಲ್ ಅಪ್ಡೇಟ್ ಆಗುತ್ತಿದೆ. ಈ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಬಿಲ್ ಹಾಕಿದ ಕೂಡಲೇ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಅನ್ನಭಾಗ್ಯದ 5 ಕೆ.ಜಿ ಅಕ್ಕಿಯ ಕಮಿಷನ್ ಹಣ ಮಾತ್ರ ಬಿಡುಗಡೆಯಾಗಿದೆ. ಆದರೆ ಕೇಂದ್ರ ಸರ್ಕಾರದ ಆಹಾರ ಭದ್ರತೆ ಯೋಜನೆ ಅಡಿಯ ಅಕ್ಕಿಯ ಕಮಿಷನ್ ಹಣ ಕಳೆದ ಮೂರು ತಿಂಗಳಿನಿಂದ ಬಿಡುಗಡೆಯಾಗಿಲ್ಲ. ಕೂಡಲೇ ಕಮಿಷನ್ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಚೆನ್ನಕೇಶವೇ ಗೌಡ, ಪ್ರಮುಖರಾದ ದೇವರಾಜ್, ಸಿದ್ದೇಗೌಡ, ಬಸವರಾಜ್, ಎಂ.ಎಸ್.ಮಂಡೇಸ್ವಾಮಿ ಮತ್ತಿತರರಿದ್ದರು.