ಜಿಲ್ಲೆ

5, 8, 9ನೇ ತರಗತಿ ಬೋರ್ಡ್ ಪರೀಕ್ಷೆ : ಮೌಲ್ಯಮಾಪನದಲ್ಲಿ ಲೋಪಗಳ ಆರೋಪ

ಮಂಜುನಾಥ.ಕೆ

ಬೆಂಗಳೂರು: ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮೂಲಕ ನಡೆಸಲಾದ ಮೌಲ್ಯಾಂಕನ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ಸಾಕಷ್ಟು ನಿರ್ಲಕ್ಷ್ಯ ಹಾಗೂ ಲೋಪಗಳಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ.
೫ನೇ ತರಗತಿ ಮಕ್ಕಳಿಗೆ ಗರಿಷ್ಠ ೪೦ ಅಂಕಗಳಿಗೆ ಇಂಗ್ಲಿಷ್ ಭಾಷಾ ಪರೀಕ್ಷೆ ನಡೆಸಲಾಗಿದೆ. ಆದರೆ, ಮೌಲ್ಯಮಾಪನ ಮಾಡಿದವರು ಕೆಲ ಶಾಲೆಯ ವಿದ್ಯಾರ್ಥಿಗಳಿಗೆ ಗರಿಷ್ಠ ಅಂಕಗಳಿಗಿಂತ ಹೆಚ್ಚು ಅಂಕ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಸಂಬಂಧ ಮಧುರಿಗಿ ಶೈಕ್ಷಣಿಕ ಜಿಲ್ಲೆಯ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳ ಆಂಗ್ಲ ಭಾಷಾ ಮೌಲ್ಯಾಂಕನದ ಅಂಕಗಳ ಪಟ್ಟಿ (ಮಾರ್ಕ್ ಶೀಟ್) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಲ ಮಕ್ಕಳಿಗೆ ೪೧ ಅಂಕಗಳನ್ನು ನೀಡಿರುವುದು ಕಂಡುಬಂದಿದೆ.
ಇನ್ನು, ಈ ಮೂರು ತರಗತಿ ಪರೀಕ್ಷಾ ಮೌಲ್ಯಮಾಪನ ತಾಲೂಕು ಮಟ್ಟದಲ್ಲಿ ಒಂದು ಶಾಲೆಯ ಉತ್ತರ ಪತ್ರಿಕೆಗಳನ್ನು ಮತ್ತೊಂದು ಶಾಲೆಯ ಶಿಕ್ಷಕರಿಂದ ನಡೆಸಬೇಕು. ಆದರೆ, ಮೌಲ್ಯಮಾಪಕ ಕೊರತೆಯಿಂದಾಗಿ ಉತ್ತರ ಪತ್ರಿಕೆಗಳನ್ನು ಆಯಾ ಶಾಲಾ ಶಿಕ್ಷಕರಿಗೇ ಮನೆಯಲ್ಲೇ ಮೌಲ್ಯಮಾಪನ ಮಾಡಿಕೊಂಡು ಬರುವಂತೆ ಹೇಳಿ ಕೊಟ್ಟು ಕಳುಹಿಸಲಾಗುತ್ತಿದೆ ಎಂಬ ಮಾಹಿತಿ ತುಮಕೂರು, ಮಧುಗಿರಿ ಸೇರಿ ಇನ್ನು ಕೆಲ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯ ಶಿಕ್ಷಕರಿಂದ ಕೇಳಿಬರುತ್ತಿದೆ.
ಈಗಾಗಲೇ ನಡೆಸಲಾಗಿರುವ ಮೌಲ್ಯಾಂಕನದಲ್ಲಿ ತಪ್ಪು ಅಥವಾ ಲೋಪಗಳಾಗಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳಲು ಆಯಾ ಶಾಲಾ ಶಿಕ್ಷಕರಿಗೇ ಸೂಚಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇಂತಹ ಅಕ್ರಮ, ಲೋಪಗಳನ್ನು ಪತ್ತೆ ಹೆಚ್ಚಿ ಸರಿಪಡಿಸಬೇಕಾದ ಶಿಕ್ಷಣ ಇಲಾಖೆಯ ಡಿಡಿಪಿಐ, ಬಿಇಒಗಳು ಯಾವುದಕ್ಕು ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.